ಮಂಗಳೂರು: ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ನವದೆಹಲಿಯ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಇವರು ಈ ಹುದ್ದೆಯಲ್ಲಿ ಐದು ವರ್ಷಗಳ ತನಕ ಇರುತ್ತಾರೆ.
ಕೊಂಕಣಿ ಕಾವ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವ ಕವಿತಾ ಟ್ರಸ್ಟ್ನ ಸ್ಥಾಪಕರೂ ಆಗಿರುವ ಮೆಲ್ವಿನ್ ರಾಡ್ರಿಗಸ್ ಈ ವರೆಗೆ ಕೊಂಕಣಿ ಕಾವ್ಯಕ್ಕೆ ಸಂಬಂಧಿಸಿ ಸುಮಾರು 220 ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆರು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಕೊಂಕಣಿ ಹಾಡುಗಳ ಧ್ವನಿಸುರುಳಿ,ಭಾಷಾಂತರಗೊಂಡ ಮೂರು ಕೃತಿಗಳು, ಆರು ಸಂಪಾದಿತ ಕೃತಿಗಳು, ಒಂದು ನೀಳ್ಗತೆ ಸೇರಿ ಒಟ್ಟು 34 ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ಮಣಿಪಾಲದ ಡಾ.ಟಿ.ಎಂ.ಎ. ಪೈ ಪುಸ್ತಕ ಪುರಸ್ಕಾರಗಳು ಒಲಿದಿವೆ. ಕೊಂಕಣಿ ಕವಿತೆ ಬರೆಯುವಲ್ಲಿ ಕರ್ನಾಟಕದಲ್ಲಿ ಯುವಜನರಿಗೆ ಅವರು ಸದಾ ಪ್ರೋತ್ಸಾಹ ನೀಡುವರಾಗಿದ್ದಾರೆ. ಅವರು ಕೊಂಕಣಿ ಕವಿಗಳಿಗೆ ಪ್ರೇರಣಾಸ್ಪೂರ್ತಿಯಾಗಿದ್ದಾರೆ.
ಗೋವಾದ ಕಾಣಕೋಣದಲ್ಲಿ 2019ರಲ್ಲಿ ನಡೆದ 24 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ್ಯತೆ ವಹಿಸಿದ್ದರು. ನಗರದ ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಕೇಂದ್ರದ ವಿಶ್ವಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಉದ್ಯಮ ನಿರ್ವಹಣೆಯಲ್ಲಿ ಸ್ನಾತಕ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಯು.ಏ,ಯಿ. ಯಲ್ಲಿ ಹಲವಾರು ವರ್ಷ ಉದ್ಯೋಗದಲಿದ್ದು, ಕೊಂಕಣಿ ಲೇಖಕರ ಸಂಘ “ದಾಯ್ಜಿ” ಸಂಘಟನೆಯನ್ನು ಕಟ್ಟಿ ಬೆಳೆಸಿದವರಲ್ಲಿ ಮೆಲ್ವಿನ್ ಕೂಡ ಒಬ್ಬರು. ಮೆಲ್ವಿನ್, ದೈಜಿವಲ್ಡ್ ಸಂಸ್ಥೆಯ ಒರ್ವ ನಿರ್ದೇಶಕರಾಗಿದ್ದಾರೆ.