ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ : ಸೌಮ್ಯ

ಕೋಲಾರ : ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ ನಿರ್ದೇಶಕರಾದ ಸೌಮ್ಯ ಅವರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ತಾ ಇಲಾಖೆ ಮತ್ತು ಮಾಧ್ಯಮಗಳ ನಡುವೆ ಸಮನ್ವಯತೆ ಮೂಢಿಸಲು ಮತ್ತು ಇಲಾಖೆಯಿಂದ ಪತ್ರಕರ್ತರಿಗೆ ಮತ್ತು ಸಣ್ಣ ಪತ್ರಿಕೆಗಳಿಗೆ ಆಗಬೇಕಾದ ಸೌಲಭ್ಯಗಳ ಕುರಿತು ಇಲಾಖೆಯ ನಿರ್ದೇಶಕರೊಂದಿಗೆ ಆಯೋಜಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಸಾರ್ವಜನಿಕರಿಗೆ ಮಾಹಿತಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುವ ಮಾದ್ಯಮಗಳಿಗೆ ಇರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾಡಳಿತ ಕಚೇರಿಯು ನಗರದಿಂದ ಸುಮಾರು 8-10 ಕಿ.ಮಿ. ದೂರ ಇರುವುದರಿಂದ ಯಾವೂದೇ ಕಾರ್ಯಕ್ರಮಗಳ ಕುರಿತು ಮಾದ್ಯಮಗಳಿಗೆ ಒಂದು ದಿನದ ಮುಂಚೆ ಮಾಹಿತಿ ನೀಡಬೇಕು, ಪತ್ರಕರ್ತರಿಗೆ ಜಿಲ್ಲಾಡಳಿತ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ ಸೌಲಭ್ಯ ಅಗತ್ಯತೆ ಇದೆ. ಸಾಧ್ಯವಾದಷ್ಟು ಸಭೆಗಳನ್ನು ಪತ್ರಿಕಾ ಗೋಷ್ಠಿಗಳನ್ನು ಮಧ್ಯಾಹ್ನದ ಒಳಗೆ ಆಯೋಜಿಸಿದರೆ ಅನುವುಂಟಾಗುವುದು, ಸಂಜೆ ವೇಳೆ ಮಾಧ್ಯಮದವರಿಗೆ ಕೆಲಸದ ಹೆಚ್ಚಿನ ಒತ್ತಡ ಇರುವುದನ್ನು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗುವುದು, ಚುನಾವಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಂದಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗುವುದು ಎಂದು ತಿಳಿಸಿದರು. 

ಟೆಂಡರ್‌ಗಳನ್ನು ಸುದ್ದಿ ರೂಪದಲ್ಲಿ ಕೊಡದೆ ಜಾಹಿರಾತು ರೂಪದಲ್ಲಿ ನೀಡಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ತಿಳಿಸಲಾಗುವುದು. ಜಾಹಿರಾತುಗಳನ್ನು ನೇರವಾಗಿ ಮಾದ್ಯಮಗಳಿಗೆ ನೀಡದೆ ವಾರ್ತಾ ಮತ್ತು ಸಾರ್ವಜನಿಕರ ಸಂರ್ಪಕ ಇಲಾಖೆಯ ಮೂಲಕವೇ ನೇರವಾಗಿ ನೀಡಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು. 

ಎಂ.ಸಿ.ಎ. ಏಜೆನ್ಸಿ ಶೇ 15 ರಷ್ಟು ಕಮೀಷನ್ ಪಡೆದು ಸಹ ಜಾಹಿರಾತು ಬಿಲ್‌ಗಳನ್ನು ವರ್ಷಾನುಗಟ್ಟಲೇ ಬಾಕಿ ಇಟ್ಟಿಕೊಂಡಿರುವ ಕುರಿತು ಸಂಬಂಧಪಟ್ಟ ಎಂ.ಸಿ.ಎ. ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಬೇಗನೆ ಪತ್ರಿಕೆಗಳ ಬಿಲ್‌ಗಳನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯ ಅಧಿಕಾರಿಗಳು ತುರ್ತು ಪತ್ರಿಕಾಗೋಷ್ಠಿ ಸಂದರ್ಭಗಳಲ್ಲಿ ವಾರ್ತಾಇಲಾಖೆಯ ಸಭಾಂಗಣದಲ್ಲಿ ಆಯೋಜಿಸಿದಲ್ಲಿ ಪತ್ರಕರ್ತರಿಗೆ ಹೆಚ್ಚಿನ ಅನುಕೂಲಕರವಾಗುವುದು ಎಂಬ ನಿಮ್ಮಗಳ ಸಲಹೆಯನ್ನು ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. 

ಕೆಲವೊಂದು ಸಭೆಗಳಲ್ಲಿ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ ಸಭೆಯ ನಂತರ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಸಭೆಯ ಮುಗಿಯುವುದು ಸಂಜೆ ಅಗುವುದರಿಂದ ಪತ್ರಕರ್ತರು ಜಿಲ್ಲಾಡಳಿತ ಕಚೇರಿಗೆ ಬರುವುದಕ್ಕೆ ತೊಂದರೆ ಅಗಲಿದೆ ಎಂಬುವುದು ನಿಜ. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯಿಂದಲೇ ಮಾಹಿತಿಯನ್ನು ರವಾನಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. 

ಮಾದ್ಯಮದವರನ್ನು ಹೊರಗಿನ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕಾದ ಸಂದರ್ಭದಲ್ಲಿ ಊಟ ,ತಿಂಡಿ, ನೀರುಗಳಿಗೆ ಕೊರತೆಯಾಗದಂತೆ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು ಶೀಘ್ರದಲ್ಲಿ ಪತ್ರಕರ್ತರಿಗೆ ಅಧ್ಯಯನ ಪ್ರವಾಸವನ್ನು ಆಯೋಜಿಸುವುದಾಗಿ ಆಶ್ವಾಸನೆ ನೀಡಿದರು. 

ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಪತ್ರಿಕೆಗಳ ಉಳಿವಿಗೆ ವಾರ್ತಾ ಇಲಾಖೆಯು ಕೈಗೊಳ್ಳಬೇಕಾದ ಕ್ರಮಗಳು, ಪತ್ರಕರ್ತರ ಜೊತೆ ವಾರ್ತಾ ಇಲಾಖೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಬಗ್ಗೆ, ಪತ್ರಕರ್ತರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಬಗ್ಗೆ, ಸಮರ್ಪಕವಾಗಿ ಜಾಹಿರಾತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಕ್ರಮ ವಹಿಸುವುದು,ಕೆಲವು ಕಾರ್ಯಕ್ರಮಗಳಿಗೆ ಪತ್ರಕರ್ತರು ಬರಲು ಸಾಧ್ಯವಾಗದ ಸಂದರ್ಭದಲ್ಲಿ ಕಾರ್ಯಕ್ರಮದ ಭಾವಚಿತ್ರ ಸುದ್ಧಿಯ ಜೊತೆಗೆ ವಿಡಿಯೋ ಕ್ಲಿಪಿಂಗ್‌ಗಳನ್ನು ಪತ್ರಕರ್ತರ ಸಂಘದ ವ್ಯಾಟ್ಸಾಫ್ ಗ್ರೂಪ್‌ಗಳಿಗೆ ಕಳುಹಿಸುವುದು, ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿ ಸಂಗ್ರಹಕ್ಕೆ ಬಂದ ಸಂದರ್ಭದಲ್ಲಿ ಪತ್ರಕರ್ತರು ಕುಳಿತುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಲು ವಾರ್ತಾ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಸಂವಾದದಲ್ಲಿ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಹಿರಿಯ ಪತ್ರಕರ್ತರಾದ ಅಬ್ಬಣಿಶಂಕರ್, ಹೆಚ್.ಎನ್.ಮುರಳೀಧರ್, ಕೋ.ನಾ.ಮಂಜುನಾಥ್, ಎನ್.ಮುನಿವೆಂಕಟೇಗೌಡ, ಎಸ್.ರವಿಕುಮಾರ್, ಎಸ್.ಚಂದ್ರಶೇಖರ್, ಸಮೀರ್‌ಅಹಮದ್, ರಾಜೇಂದ್ರ ಸಿಂಹ, ಎಸ್.ರವಿಕುಮಾರ್, ಸಿ.ಜಿ.ಮುರಳಿ, ರಮೇಶ್, ನಾಗರಾಜ್,  ಮಾತನಾಡಿದರು,   

ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಸ್ಕಂದಕುಮಾರ್,  ಎಸ್.ಸಚ್ಚಿದಾನಂದ, ಬೆಟ್ಟಣ್ಣ, ಆಸೀಫ್‌ಪಾಷ, ಸಿ.ಕೆ.ಲಕ್ಷ್ಮಣ್, ಶಮ್ಗರ್, ಎನ್, ಸತೀಶ್, ಕೆ.ಜಿ.ಮಂಜುನಾಥ್, ಎಂ.ಲಕ್ಷ್ಮಣ, ಮದನ್, ಎನ್.ಶಿವಕುಮಾರ್, ಎನ್.ಗಂಗಾಧರ್, ಗೋಪಿ, ಸುಹಾಸ್, ಚಂದ್ರು, ಜೆ.ಎಂಬರೀಶ್, ನವೀನ್ ವಾರ್ತಾಇಲಾಖೆಯ ಅಧಿಕಾರಿಗಳಾದ ಮಂಜೇಶ್, ಸುಧಾ ಮುಂತಾದವರು ಉಪಸ್ಥಿತರಿದ್ದರು.