ಕುಂದಾಪ್ರ ಕನ್ನಡ ಅಕಾಡೆಮಿಗೆ ಸಚಿವರ ತಿರಸ್ಕಾರ – ರೊಚ್ಚಿಗೆದ್ದ ಕುಂದಗನ್ನಡಿಗರು – ಸಚಿವ ಸುನೀಲ್ ಕುಮಾರ್ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ- ಬಿ. ಅಪ್ಪಣ್ಣ ಹೆಗ್ಡೆ

ಕುಂದಾಪುರ, ಫೆ.೨೨: ಕರ್ನಾಟಕ ರಾಜ್ಯಕ್ಕೆ, ಭಾರತ ದೇಶಕ್ಕೆ ಸರ್ವ ರಂಗಗಳಲ್ಲೂ ಅದ್ಭುತವಾದ ಕೊಡುಗೆಗಳನ್ನು ನೀಡಿದ ವಿಶಿಷ್ಟ ಊರು ಕುಂದಾಪುರದ ಹೆಮ್ಮೆಯಾದ ವಿಶಿಷ್ಟ ಭಾಷೆಯಾದ ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ವರ್ತನೆಯು ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡ ಭಾಷಿಗರನ್ನು ರೊಚ್ಚಿಗೆಬ್ಬಿಸಿದೆ.

ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ದಶಕಗಳ ಬೇಡಿಕೆಯ ಕುರಿತು ಶಾಸಕ ಮಂಜುನಾಥ ಭಂಡಾರಿಯವರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯವಾಗಿ ಪರಿಗಣಿಸಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಮನವಿ ಸಲ್ಲಿಸಿದ್ದರು. ಆದರೆ, ವಿಶಿಷ್ಟವಾದ ಕುಂದಾಪ್ರ ಕನ್ನಡದ ಮಹತ್ವವನ್ನರಿಯದೆ, ಈ ಬಗ್ಗೆ ಯಾವ ಅಧ್ಯಯನವನ್ನೂ ಮಾಡದೆ, ಪರಿಣತರ ಸಲಹೆಗಳನ್ನೂ ಪಡೆದುಕೊಳ್ಳದೆ, ಸಚಿವರು ವಿರೋಧ ಪಕ್ಷದವರಿಂದ ಪ್ರಸ್ತಾವನೆ ಎಂಬ ಒಂದೇ ಕಾರಣದಿಂದ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಲಕ್ಷಾಂತರ ಮಂದಿ ಕುಂದ ಕನ್ನಡಿಗರಿಗೆ ಅತೀವ ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರ ನಡೆಯನ್ನು ಖಂಡಿಸಿ ಮಾಜಿ ಶಾಸಕ, ಹಿರಿಯ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಕುಂದಾಪುರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿ ನಡೆಸಿ, ಸಚಿವ ಸುನಿಲ್ ಕುಮಾರ್ ಅವರ ವರ್ತನೆಯನ್ನು ಖಂಡಿಸಿದ್ದಾರೆ.

ನಿನ್ನೆ ಸಂಜೆ 4 ಗಂಟೆಗೆ ಹರಿಪ್ರಸಾದ್ ಅಕ್ಷತ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮುತ್ಸದಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆಯವರು ಪತ್ರಿಕಾ ಗೋಷ್ಟಿಯಲ್ಲಿ ನೀಡಿದ ಹೇಳಿಕೆಯ ಪೂರ್ಣಪಾಠ ಇಂತಿದೆ –


“ಮೊತ್ತ ಮೊದಲು ನಾನು ಕನ್ನಡ ಸಂಸ್ಕ್ರತಿ ಇಲಾಖೆಯ ಮತ್ತು ವ್ಯಿದ್ಯುತ್ ಮಂತಿ ಸುನೀಲ್ ಕುಮಾರ್ ಇವರ ಬೆಜವಾಬ್ದಾರಿ ಕುಂದಾಪ್ರ ಕನ್ನಡಕ್ಕೆ ಕುಂದಾಪ್ರ ಅಕಾಡೆಮಿ ನೀಡಲಿಕೆ ಆಗುವುದಿಲ್ಲ ಎಂದು ವಿಧಾನ ಸಭೆಯಲ್ಲಿ ನೀಡಿದ ಲಿಖಿತ ಉತ್ತರವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪತ್ರಿಕೆ ಗೋಷ್ಟಿಯಲ್ಲಿ ತಿಳಿಸಿ ಸಚಿವ ಸುನೀಲ್ ಕುಮಾರ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ “ಎಂದು ಹೇಳಿದರು.

ಮುಂದುವರೆಸಿ ಅವರು ಕುಂದಾಪುರ ಶುದ್ಧ ಕನ್ನಡದ ನೆಲ. ಇದರ ಮೇಲೆ ಬೇರೆ ಭಾಷೆಯ ಪ್ರಭಾವವಿಲ್ಲ. ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಕನ್ನಡದ ಉಚ್ಚಾರ ಮಾಡಲಾಗುತ್ತಿದೆಯಾದರೂ ಕುಂದಾಪ್ರ ಕನ್ನಡದ ಪರಿಶುದ್ಧತೆ, ಜಾನಪದ ಸಾಹಿತ್ಯದ ವೈಶಿಷ್ಟ್ಯ, ಸಂಸ್ಕೃತಿ ಬೇರೆಲ್ಲೂ ಇಲ್ಲ. ಸಾವಿರಾರು ವರ್ಷಗಳಿಂದ ತನ್ನತನ ಉಳಿಸಿಕೊಂಡಿರುವ ಈ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಜನಪದ ಸಾಹಿತ್ಯದಲ್ಲಿ ಕುಂದಾಪ್ರ ಕನ್ನಡದಷ್ಟು ಸೊಗಡು ಎಲ್ಲಿಯೂ ಇಲ್ಲ. ಸಾವಿರಾರು ಪದಗಳ ಕುಂದಾಪ್ರ ಕನ್ನಡ ನಿಘಂಟು ಮಾಡಿದವರಿಗೂ ಈ ಭಾಷೆಯ ಎಲ್ಲ ಹಳೆಯ ಪದ ಪ್ರಯೋಗಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಂದಾಪ್ರ ಕನ್ನಡದ ಆಳ-ಅಗಲ ಅಷ್ಟು ವಿಸ್ತಾರವಾದುದು. ಈ ವಿಶಿಷ್ಟ ಭಾಷೆಯ ಉಳಿವು, ಅಧ್ಯಯನಕ್ಕಾಗಿ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿಯನ್ನು ಸರ್ಕಾರ ಸ್ಥಾಪಿಸಬೇಕು ಎಂದು ಬಹುತೇಕ ಸಾಹಿತ್ಯ ಸಮ್ಮೇಳನ, ಸಮಾವೇಶಗಳಲ್ಲಿ ಆಗ್ರಹಪಡಿಸಲಾಗುತ್ತಿದೆ.

ಈ ವಿಷಯವಾಗಿ ಸರ್ಕಾರಕ್ಕೆ ಮನವಿಯನ್ನೂ ನೀಡಲಾಗಿತ್ತು. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ವಿವಿಧ ವಿಧ್ವಾಂಸರಿಂದ ಮಾಹಿತಿ ಸಂಗ್ರಹಿಸಿ ವಿಧಾನ ಪರಿಷತ್ ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಪ್ರಸ್ತಾಪ ಮಾಡಿ, ಸರ್ಕಾರದಿಂದ ಉತ್ತರ ಬಯಸಿದ್ದರು. ಆದರೆ, ಸಚಿವ ಸುನಿಲ್ ಕುಮಾರ್ ಈ ಬಗ್ಗೆ ನಿರಾಶಾದಾಯಕ ಉತ್ತರ ನೀಡಿದ್ದಲ್ಲದೆ, ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಅಸಮರ್ಪಕ ಹೇಳಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಯಾರೊಂದಿಗೂ ಸಮಾಲೋಚಿಸದೆ, ಅಧ್ಯಯನ ಮಾಡದೆ, ಕರ್ನಾಟಕದಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವುದು ಸಾಮಾನ್ಯ ಎಂಬಂತೆ ಉತ್ತರ ನೀಡಿರುವುದು ತಿಳುವಳಿಕೆ ಇಲ್ಲದವರ ಉತ್ತರ ಎಂದೇ ತಿಳಿಯಬೇಕಾಗುತ್ತದೆ. ಸಚಿವರು ಉಡುಪಿ ಜಿಲ್ಲೆಯವರೇ ಆಗಿದ್ದು, ಅವರ ಕ್ಷೇತ್ರದ ಬಹಳಷ್ಟು ಗ್ರಾಮಗಳಲ್ಲಿ ಕುಂದಾಪ್ರ ಕನ್ನಡ ಭಾಷೆಯ ಜನರೇ ಇದ್ದರೂ ಈ ರೀತಿಯ ಅಸಡ್ಡೆಯ ಉತ್ತರ ನೀಡಿರುವುದು ಖಂಡನೀಯ.

ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಹಾಗೂ ಮಂಗಳೂರು ವಿ ವಿ ಯಲ್ಲಿ ಕುಂದಾಪ್ರ ಕನ್ನಡ ಪೀಠಕ್ಕೆ ಅನುದಾನ ಮಂಜೂರಾತಿ ಬಗ್ಗೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸುವ, ಮತ್ತು ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ರಾಜ್ಯದ ಧಾರವಾಡ, ಬಳ್ಳಾರಿ, ಮಂಗಳೂರು, ಮಡಿಕೇರಿ ಮೊದಲಾದ ಪ್ರದೇಶಗಳಲ್ಲಿ ಕನ್ನಡದ ಮೇಲೆ ಮರಾಠಿ, ತೆಲುಗು, ತಮಿಳು, ಮಲಯಾಳಮ್ ಇತ್ಯಾದಿ ಅನ್ಯಭಾಷೆಗಳ ಪ್ರಭಾವವಿದೆ. ಆದರೆ ಕುಂದಾಪ್ರ ಕನ್ನಡದ ಮೇಲೆ ಯಾವುದರ ಪ್ರಭಾವವೂ ಇಲ್ಲದೆ ಶುದ್ಧವಾಗಿದೆ. ಹಿಂದಿನ ರಾಜ ಮಹಾರಾಜರ ಕಾಲದಲ್ಲೂ ಕುಂದಾಪ್ರ ಕನ್ನಡಕ್ಕೆ ಮಹತ್ವವಿತ್ತು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಲಕ್ಷ್ಮೇಶ್ವರದಲ್ಲಿನ ಶಾಸನವೊಂದರಲ್ಲೂ ಕುಂದಾಪ್ರ ಕನ್ನಡದ ಉಲ್ಲೇಖವಿದೆ. ಪಂಪ, ರನ್ನರ ಕಾವ್ಯಗಳಲ್ಲೂ ಕುಂದಾಪ್ರ ಕನ್ನಡದ ಪದಗಳಿವೆ. ಇಷ್ಟೆಲ್ಲಾ ಸಮೃದ್ಧಿಯಾದ ಭಾಷೆಯ ಬಗ್ಗೆ ಅರಿವಿಲ್ಲದೆ ಉತ್ತರಿಸಿರುವುದು ಸಚಿವರ ಜ್ಞಾನದ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಪ್ಪಣ್ಣ ಹೆಗ್ಡೆ ಖಂಡಿಸಿದ್ದಾರೆ. ಮಾತ್ರವಲ್ಲ ಚುನಾವಣೆಯೊಳಗೆ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ಘೋಷಣೆ ಮಾಡದಿದ್ದರೆ, ಸಮಾನ ಮನಸ್ಕರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿಯೂ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ. ಗಣಪತಿ ಶ್ರೀಯಾನ್, ಕುಂದಾಪುರ ಜಿಲ್ಲಾ ರಚನೆ ಹೋರಾಟ ಸಮಿತಿ ಅಧ್ಯಕ್ಷ ಮುಂಬಾರು ದಿನಕರ ಶೆಟ್ಟಿ, ಶಂಕರನಾರಾಯಣ ತಾಲ್ಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಸ್ವಾವಲಂಬನಾ ಸಂಘದ ಅಧ್ಯಕ್ಷ ಪ್ರೊ. ವೆಂಕಟೇಶ ಪೈ, ಬಂಟರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಕುಂದಾಪ್ರ ಕನ್ನಡದ ವಿಶಿಷ್ಟತೆಯ ಬಗ್ಗೆ ವಿವರಿಸಿ, ಅಕಾಡೆಮಿ ಸ್ಥಾಪನೆಯ ಬಗ್ಗೆ ಒತ್ತಾಯಿಸಿದರು. ಚುನಾವಣೆ ಸಮೀಪಸುತ್ತಿರುವ ಈ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ನೀಡಿದ ಈ ಬಾಲಿಶ ಹೇಳಿಕೆ ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡಿಗರನ್ನು ಕೆರಳಿಸಿದೆ. ಮಾತ್ರವಲ್ಲ ವಿರೋಧ ಪಕ್ಷಗಳಿಗೆ ಒಂದು ಅಸ್ತ್ರವನ್ನೂ ನೀಡಿದಂತಾಗಿದೆ. ಈ ಪ್ರದೇಶದ ವಿವಿಧ ಹೋರಾಟ ಸಮಿತಿಗಳಿಗೆ ಹೊಸ ಕೆಚ್ಚು ತುಂಬಿದೆ. ಪತ್ರಕರ್ತ ಯು. ಎಸ್. ಶೆಣೈ ಸ್ವಾಗತಿಸಿ, ವಂದಿಸಿದರು.