ಶ್ರೀನಿವಾಸಪುರದಲ್ಲಿ ಏರ್ಪಡಿಸಿದ್ದ ಸಿನಿಮಾ ವೀಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಸಿ.ಎಚ್.ನಾಯಕ್ : ಕಿರು ಚಿತ್ರಗಳು ಹೆಚ್ಚು ಜನಪ್ರಿಯ

ಶ್ರೀನಿವಾಸಪುರ: ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಸಿಗುವ ಕಿರು ಚಿತ್ರಗಳು ಹಾಗೂ ಲಿರಿಕಲ್ ವೀಡಿಯೋಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಚಲನಚಿತ್ರ ನಿರ್ದೇಶಕ ಸಿ.ಎಚ್.ನಾಯಕ್ ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಸಿ.ಎಚ್.ನಾಯಕ್ ಕ್ರಿಯೇಷನ್ಸ್ ವತಿಯಿಂದ ಏರ್ಪಡಿಸಿದ್ದ ಸಿನಿಮಾ ವೀಕ್ಷಕರೊಂದಿಗೆ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿದರು.
ಈಗ ಕನ್ನಡ ಚಲನ ಚಿತ್ರಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಾರತೀಯ ಚಿತ್ರರಂಗ ಚಂದನ ವನದ ಕಡೆ ತಿರುಗಿ ನೋಡುತ್ತಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಇದರಲ್ಲಿ ಪ್ರೇಕ್ಷಕರ ಪಾಲು ದೊಡ್ಡದು. ಅವರ ಬೆಂಬಲವೇ ಚಿತ್ರ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರಿಗೆ ಶಕ್ತಿ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಅಲ್ಲಿನ ಕಾಡು, ಕಣಿವೆ, ಬೆಟ್ಟ, ಗುಡ್ಡ, ಕೆರೆ, ಕಾಲುವೆಗಳು ಚಿತ್ರೀಕರಣಕ್ಕೆ ಯೋಗ್ಯವಾಗಿವೆ. ಚಿತ್ರೀಕರಣಕ್ಕೆ ಹೊಸ ಸ್ಥಳ ಹುಡುಕುವ ನಿರ್ಮಾಪಕರು ಬಳಸಿಕೊಳ್ಳಬಹುದಾಗಿವೆ. ನಿತ್ಯ ನಿಸರ್ಗ ಸೌಂದರ್ಯದ ನಡುವೆ ಜೀವಿಸುವ ಸ್ಥಳೀಯರು ನಿಜಕ್ಕೂ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೀತಿ ಮತ್ತು ಭ್ರಮೆ ನಡುವೆ ಸಾಗುವ ‘ಮತ್ತೆ ಸಿಗುವಳೇನೋ’ ಎಂಬ ಹೆಸರಿನ ಕಿರು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದಲ್ಲಿ ಈಗಾಗಲೇ ತಮ್ಮ ಗೀತೆಗಳ ಮೂಲಕ ಜನಪ್ರಿಯವಾಗಿರುವ ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರ ಭಾವಗೀತೆಯೊಂದನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ತೆಲುಗು ಭಾಷೆ ಪ್ರಭಾವ ಹೆಚ್ಚಾಗಿರುವ ಗಡಿ ಪ್ರದೇಶದಲ್ಲಿ, ಜನರು ಕನ್ನಡ ಚಿತ್ರಗಳ ವೀಕ್ಷಣೆಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಿರುಚಿತ್ರಗಳ ವೀಕ್ಷಣೆಯಿಂದ, ಇದ್ದಲ್ಲಿಯೇ ಕಡಿಮೆ ಅವಧಿಯಲ್ಲಿ ಪೂರ್ಣ ಚಿತ್ರವೊಂದನ್ನು ವೀಕ್ಷಿಸಿದ ತೃಪ್ತಿ ದೊರೆಯುತ್ತಿದೆ. ಚಿತ್ರದ ಸಂದೇಶ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಚಿತ್ರ ಪ್ರೇಮಿಗಳೊಂದಿಗೆ ಸಂವಾದ ನಡೆಸಲಾಯಿತು.
ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ, ಸಹಾಯಕ ನಿರ್ದೇಶಕ ರಾಜಶೇಖರ್, ಸಂಕಲನಕಾರ ನಿಶಾಂತ್ ಕುಮಾರ್, ಚಂದನ್ ಇದ್ದರು.