ಶ್ರೀನಿವಾಸಪುರ: ಜನರು ಕುಷ್ಠರೊಗವನ್ನು ಬೇರು ಸಹಿತ ಕಿತ್ತೊಗೆದು ಇತಿಹಾಸ ನಿರ್ಮಿಸಬೇಕು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಂಜಿಲಮ್ಮ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೋಗ ಪಾಪದ ಫಲ ಎಂಬುದರಲ್ಲಿ ಹುರುಳಿಲ್ಲ. ಎಲ್ಲ ಕಾಯಿಲೆಗಳಂತೆ ಇದೂ ಸಹ ಒಂದು ಕಾಯಿಲೆ ಎಂದು ತಿಳಿಯಬೇಕು ಎಂದು ಹೇಳಿದರು.
ಕುಷ್ಠರೋಗಿ ಸಮಾಜದ ಒಳಗೆ ಬದುಕಲು ಬಿಡಬೇಕು. ರೋಗ ವಾಸಿಯಾಗಲು ಅಗತ್ಯ ಚಿಕಿತ್ಸೆ ಕೊಡಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ಕೀಳಾಗಿ ಕಾಣಬಾರದು. ಮಾನವೀಯತೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದು. ಪೌರ ಕಾರ್ಮಿಕರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯದ ಕಡೆ ಗಮನ ಹರಿಸಬೇಕು. ಯಾರಿಗೇ ಆದರೂ ಕುಷ್ಠ ರೋಗದ ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷಿಸದೆ ವೈದ್ಯರಲ್ಲಿ ತೋರಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥರೆಡ್ಡಿ, ಪುರಸಭೆ ಕಂದಾಯ ಅಧಿಕಾರಿ ನಾಗರಾಜ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಿರಿಯ ಎಂಜಿನಿಯರ್ ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ಎನ್.ಶಂಕರ್ ಇದ್ದರು.