ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ, ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು : ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ, ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಕೊಪ್ಪವಾರಪಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಾಂಪೌಂಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಸರ್ಕಾರಿ ಶಾಲೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಶಿಕ್ಷಣ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪ್ರತಿ ಶಾಲೆಗೂ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ತರಗತಿ ಕೊಠಡಿ, ಕಾಂಪೌಂಡ್, ಗ್ರಂಥಾಲಯ ಒದಗಿಸಲಾಗಿದೆ. ಹಾಗಾಗಿ ಪೋಷಕರು ನಿಶ್ಚಿಂತೆಯಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬಹುದು ಎಂದು ಹೇಳಿದರು.
ಶಿಕ್ಷಕ ಸಮುದಾಯ ಸರ್ಕಾರಿ ಶಾಲೆ ಉಳಿವಿಗೆ ವಿಶೇಷ ಗಮನ ನೀಡಬೇಕು. ಪೋಷಕರ ಮನವೊಲಿಸಿ ಮಕ್ಕಳು ಶಾಲೆಗೆ ದಾಖಲಾಗುವಂತೆ ಮಾಡಬೇಕು. ಇಲ್ಲವಾದರೆ ಸರ್ಕಾರದ ಸೌಲಭ್ಯ ವ್ಯರ್ಥವಾಗುತ್ತದೆ. ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯ ದಲಿತ ಸಂಘಟನೆಗಳ ಚಾಲನಾ ಸಮಿತಿ ಮುಖಂಡ ಎನ್.ಮುನಿಸ್ವಾಮಿ ಕಾಂಪೌಂಡ್ ಉದ್ಘಾಟಿಸಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಪಿಡಿಒ ಗೌಸ್ ಸಾಬ್, ಎಂಜಿನಿಯರ್ ಗೌತಮಿ, ಮುಖಂಡರಾದ ಕೆ.ಕೆ.ಮಂಜು, ವಿ.ಮುನಿಯಪ್ಪ, ಬಾಬುರೆಡ್ಡಿ, ರಾಮಚಂದ್ರಾರೆಡ್ಡಿ, ರವಣಪ್ಪ, ಬೈಯಣ್ಣ ಇದ್ದರು.