ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕೈಜೋಡಿಸಿ ; ನ್ಯಾ. ಸುನಿಲ ಹೊಸಮನಿ

ಕೋಲಾರ ಜನವರಿ 25 : ಸ್ವಾತಂತ್ರ್ಯ ಭಾರತ ದೇಶದಲ್ಲಿ ಸಾಮಾಜಿಕ ಪಿಡುಗಾಗಿರುವ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಿದರೆ ದೇಶದ ಸಮಗ್ರ ಸಮಾನತೆಯ ಬೆಳವಣಿಗೆಗೆ ಸಹಕಾರಿಯಾಗುವುದು ಎಂದು ಸಿವಿಲ್ ನ್ಯಾಯಮೂರ್ತಿಗಳಾದ ಸುನಿಲ ಹೊಸಮನಿ ತಿಳಿಸಿದರು.
ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕೇರಿಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕೋಲಾರ ಇವರ ಸಹಯೋಗದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ ಕಾರ್ಮಿಕರಿಗೆ ಕಾನೂನು ಮತ್ತು ಸರ್ಕಾರದ ಸೌಲಭ್ಯಗಳ ಕುರಿತಾದ ಕಾನೂನಿನ ಅರಿವು ನೆರವು ಕಾರ್ಯಕ್ರಮ ಬಡ ಪೋಷಕರ ಆರ್ಥಿಕ ಸ್ಥಿತಿ ಮತ್ತಿತರ ಅನಿವಾರ್ಯ ಕಾರಣಗಳಿಂದ ಶಿಕ್ಷಣ ಪಡೆಯದೇ ವಂಚಿತರಾಗಿ ಅನೇಕ ಮಕ್ಕಳು ಒತ್ತಾಯ ಪೂರಕವಾಗಿ ಹೊಟೆಲ್, ಕಾರ್ಖಾನೆ, ವರ್ಕ್‍ಶಾಪ್, ಇಟ್ಟಿಗೆ ಪ್ಯಾಕ್ಟರಿ ಮತ್ತಿತರೆ ಕಡೆಗಳಲ್ಲಿ ಬಾಲ ಕಾರ್ಮಿಕರಾಗುತ್ತಿದ್ದು ಇದು ಅಪರಾಧ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು
6ನೇ ವಯಸ್ಸಿನಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಆಗ ದೇಶ ಅಭಿವೃದ್ಧಿ ಸಾಧ್ಯ. ದೇಶದ ಅಭಿವೃದ್ಧಿ ರೂಪಿಸುವ ಮಕ್ಕಳು ಬಾಲ್ಯದಲ್ಲಿ ದುಡಿಮೆಗೆ ಹೋಗುವುದನ್ನು ತಡೆಯಲು ನಾಗರೀಕ ಸಮಾಜ ಶ್ರಮಿಸಬೇಕು ಎಂದರು
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲ ಧನರಾಜ್ ಮಾತನಾಡಿ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಯ ಪ್ರಮಾಣ ವಚನ ಬೋಧಿಸಿದರು. ದೇಶದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದ್ದು, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತಳ್ಳುವುದು ಅಪರಾದ. ಪಾಲಕ ಪೋಷಕರು ಇನ್ನು ಚೆನ್ನಾಗಿ ಅರಿತುಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಮೂಲಕ ಅವರಿಗೆ ಉತ್ತಮ ವ್ಯಕ್ತಿಗಳಾಗಿ ರೂಪಿಸಿ ಜವಬ್ದಾರಿ ಹೊರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಕೀಲ ಸತೀಶ್, ಕುಡುವನಹಳ್ಳಿ ಗಣೇಶಪ್ಪ, ರಾಷ್ಟ್ರಪ್ರಶಸ್ತಿ ವಿಜೇತರಾದ ಮುಳವಾಗಲಪ್ಪ, ಕಲಾವಿದ ಈನೆಲ ಈಜಲ ವೆಂಕಟಾಚಲಪತಿ ತಂಡದಿಂದ ಜಾಗೃತಿ ಗೀತೆಗಳ ಕಾರ್ಯಕ್ರಮ ನಡೆಯಿತು.