ಗ್ರಾಮೀಣ ಜನರ ಅಹವಾಲುಗಳ ಸ್ಪಂದನೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನ – ಜಿಲ್ಲಾಧಿಕಾರಿ ವೆಂಕಟ್ ರಾಜಾ

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳಿಗೆ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.
ಇಂದು ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯ ಆಲವಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಪ್ರತಿ ತಿಂಗಳು ಮೂರನೇ ಶನಿವಾರದಂದು ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಅತಿ ಹಿಂದುಳಿದ ಹಳ್ಳಿಯನ್ನು ಆಯ್ದುಕೊಂಡು ಅಲ್ಲಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ , ತ್ವರಿತ ಪರಿಹಾರ ಒದಗಿಸುವ ಕಾರ್ಯಗಳು ಈ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿವೆ.
ಇಂದಿನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಪಿಂಚಣಿ ಮಂಜೂರಿ ಆದೇಶ , ಪೌತಿ ಖಾತೆ ಆದೇಶ , ಹಕ್ಕು ಪತ್ರ ಪಹಣಿ ತಿದ್ದುಪಡಿ ಪತ್ರಗಳನ್ನು ವಿತರಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಪ್ರತಿ ತಿಂಗಳು ಗ್ರಾಮವೊಂದಕ್ಕೆ ಬಂದು ಜನರಿಗೆ ಸ್ಪಂದಿಸುತ್ತಿರುವುದು ಸರ್ಕಾರದ ಜನಪರ ಕಾರ್ಯವಾಗಿದೆ. ಗ್ರಾಮೀಣ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕಂದಾಯ ಇಲಾಖೆಯ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ , ವಿಧವಾ ವೇತನ , ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡುಗಳು , ಆಭಾ ಕಾರ್ಡ್ , ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಗುರುತಿನ ಚೀಟಿಗಳು ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಮಂಜೂರಾತಿ ಪತ್ರ , ಹಕ್ಕು ಪತ್ರ , ದಾಖಲೆಗಳನ್ನು ವಿತರಿಸಲಾಯಿತು.
ಗ್ರಾಮಸ್ಥರು ಗ್ರಾಮದ ಕೆರೆ ಕಟ್ಟೆಯನ್ನು ದುರಸ್ಥಿ ಮಾಡಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಕೆರೆ ಕಟ್ಟೆಯನ್ನು ದುರಸ್ಥಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಯೋಜನೆಯಡಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನವನ್ನು ನೆರವೇರಿಸಿದರು. ಗರ್ಭಿಣಿ ಸ್ತ್ರೀಯರು ಆರೋಗ್ಯದ ಕಾಳಜಿ ಮಾಡಬೇಕು ಮತ್ತು ಕಾಲ ಕಾಲಕ್ಕೆ ಸೂಕ್ತ ಔಷಧಿಗಳು ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು. ನಂತರ ವಿವಿಧ ಇಲಾಖೆಗಳ ಮಳಿಗೆಗಳಿಗೆ ಭೇಟಿ ನೀಡಿ ಎಲ್ಲ ಇಲಾಖೆಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು.
ಸಾರ್ವಜನಿಕರು ಕೃಷಿ , ಆರೋಗ್ಯ , ತೋಟಗಾರಿಕೆ , ಪಶುಪಾಲನೆ , ಆಹಾರ ಇನ್ನೂ ಮುಂತಾದ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆಯಾ ಮಳಿಗೆಗಳಲ್ಲಿ ಪಡೆಯಬಹುದು ಎಂದರು.
ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರರಾದ ಶರೀನ್ ತಾಜ್ ಅವರು ಮಾತನಾಡಿ , ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಈ ಗ್ರಾಮವು ಜೆ.ತಿಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದ್ದು , ಈ ಗ್ರಾಮದಲ್ಲಿ ಸುಮಾರು 1075 ಜನ ಸಂಖ್ಯೆಯನ್ನು ಒಳಪಟ್ಟಿದ್ದು , 231 ಮನೆಗಳಿವೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಾರ್ಯ ಈ ಗ್ರಾಮದಲ್ಲಿ ಶೇ .99 ರಷ್ಟು ಗುರಿಯನ್ನು ಸಾಧಿಸಲಾಗಿದೆ.
ಈ ಗ್ರಾಮಕ್ಕೆ ಮಂಜೂರಾಗಿರುವ 5 ಸ್ಮಶಾನಗಳಲ್ಲಿ 1 ಸ್ಮಶಾನವು ಒತ್ತುವರಿಗೆ ಒಳಗಾಗಿದ್ದು , ಪ್ರಸ್ತುತ ಒತ್ತುವರಿಯನ್ನು ತೆರವುಗೊಳಿಸಿ ಆದೇಶಿಸಲಾಗಿದೆ ಎಂದರು.
ಇಂದು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದ್ದು , ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಉಚಿತ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ ಮತ್ತು ಉಚಿತ ಜಾನುವಾರು ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದೆ.
ಜಾನುವಾರು ಶಿಬಿರದಲ್ಲಿ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ , ಉಪಾಧ್ಯಕ್ಷ ನಾಗೇಶ್‌ರೆಡ್ಡಿ , ಸದಸ್ಯೆ ಭಾರತಮ್ಮ . ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್ ,ಕಸಬಾ ಕಂದಾಯ ನಿರೀಕ್ಷಕ ಮುನಿರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ , ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ , ಸಹಾಯಕ ನಿರ್ದೇಶಕ ವಿ.ಕೃಷ್ಣಪ್ಪ , ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ್ಪ , ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ , ಕೃಷಿ ಇಲಾಖೆಯ ರಘು , ಈಶ್ವರ್ , ತಾಲ್ಲೂಕು ಆರೋಗ್ಯಾಧಿಕಾರಿ ಡಾ || ವಿಶ್ವನಾಥ್‌ರೆಡ್ಡಿ , ಲೋಕೋಪಯೋಗಿ ಇಲಾಖೆಯ ಎಂ.ನಾರಾಯಣಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು
.