ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಮಾಹಿತಿ ಶಿಬಿರ 2023

ನಾವೆಲ್ಲಾ ಕೂಡು ಕುಟುಂಬ ಪದ್ಧತಿಯಿಂದ ಬಂದುದರಿಂದ ನಮ್ಮಲ್ಲಿ ನಮಗರಿವಿಲ್ಲದೇ ರೀತಿ ನೀತಿ ಸಾಮಾಜಿಕ ಕಟ್ಟುಪಾಡುಗಳಿಂದ ಬದ್ಧರಾಗಿದ್ದೇವೆ. ಆದರೆ ಜಾಗತೀಕರಣದಿಂದಾಗಿ ವಿಜ್ಞಾನ ಮತ್ತು ತಾಂತ್ರಿಕತೆ ಗಣನೀಯ ಬೆಳವಣಿಗೆ ಹೊಂದಿರುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲ ಬಾಳಿ ಬದುಕಬೇಕಾಗಿದೆ. ಗತಕಾಲದ ರೀತಿ-ನೀತಿ ನಿಯಮ ಹಬ್ಬ-ಹರಿದಿನ ಆಚರಣೆ ನಂಬಿಕೆ ಇವುಗಳ ಅರಿವು ಇಂದಿನ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಬೇಕಾಗುತ್ತದೆ. ಎಂದು ಶ್ರೀಮತಿ ಶಾರದಾ ಗೊಲ್ಲ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸಂಗಡಿ ಇವರು ಹೇಳಿದರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ), ಬಾಳ್ಕುದ್ರು ಹಂಗಾರಕಟ್ಟೆ, ಗ್ರಾಮ ಪಂಚಾಯತ್ ಹೊಸಂಗಡಿ, ಸರಕಾರಿ ಪ್ರೌಢಶಾಲೆ ಹೊಸಂಗಡಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರ ಉದ್ಘಾಟಿಸಿ ಮಾತಾಡಿದರು.
ಸಭಾಧ್ಯಕ್ಷತೆಯನ್ನು ಶ್ರೀ ಗುರುಪ್ರಸಾದ್ ಎಚ್. ಮುಖ್ಯಶಿಕ್ಷಕರು ಸರಕಾರಿ ಪ್ರೌಢಶಾಲೆ ಹೊಸಂಗಡಿ ಇವರು ಮಾತನಾಡಿ ನಮ್ಮ ಜೀವನವೇ ಒಂದು ಮೌಲ್ಯ ಈ ಮೌಲ್ಯ ಸಾಧನೆಗಾಗಿ ನಾವು ದೀರ್ಘ ಹೋರಾಟ, ಪ್ರಯತ್ನಶೀಲತೆ, ಕಷ್ಟಸಹಿಷ್ಣುತೆ, ಅಗಾಧ ಆತ್ಮವಿಶ್ವಾಸ, ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು,
ಮುಖ್ಯ ಅತಿಥಿಯಾಗಿ ಶ್ರೀ ನಾಗು ಕುಲಾಲ್ ಉದ್ಯಮಿ, ಸಿದ್ಧಾಪುರ ಇವರು ಮಾತನಾಡಿ ಪ್ರತಿಭೆ ಎನ್ನುವುದು. ಪ್ರತೀ ವ್ಯಕ್ತಿಯಲ್ಲೂ ಅಡಕವಾಗಿದೆ. ಅದನ್ನು ಕಾಲಕಾಲಕ್ಕೆ ಉತ್ತೇಜಿಸಿ ಬೆಳೆಸಿದಾಗ ಅದು ಅನಾವರಣಗೊಳ್ಳುವುದು. ಅಲ್ಲದೇ ನಾವು ಅತಿಯಾದ ತಾಂತ್ರಿಕತೆ ಅಂದರೆ ಮೊಬೈಲ್ ಬಳಕೆ ಸಲ್ಲದು. ಅದನ್ನು ಹಿತಮಿತವಾಗಿ ಬಳಸಬೇಕು. ನಮ್ಮ ಹಬ್ಬ-ಹರಿದಿನಗಳ ಬಗ್ಗೆ ಆಸಕ್ತಿ ಬೆಳೆಸಿ ನಮ್ಮ ಪರಂಪರೆಯನ್ನು ನಾವೇ ಉಳಿಸಬೇಕೆಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಆನಂದ ಶೆಟ್ಟಿ ಮಾತನಾಡಿ ನಮ್ಮಲ್ಲಿರುವ ಜೀವನ ಮೌಲ್ಯಗಳು ನಮ್ಮ ಅಂತರಂಗದ ನೆಲೆಗಳಾಗಿರುತ್ತದೆ. ಇದು ನಮ್ಮ ಬದುಕಿಗೆ ಬೆಳಕಾಗಬೇಕೆಂತಾದರೆ ಅದು ಸಮಾಜದ ವಿವಿಧ ಹಂತಗಳನ್ನು ಪರಿಗಣಿಸಿ ಸುಧಾರಣಾ ಕ್ರಮವಾಗಿ ಬದಲಾಗಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀಮತಿ ಯಶೋಧಾ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸಂಗಡಿ ಸದಸ್ಯರಾದ ರವಿ ಶೆಟ್ಟಿ ಅವಿನಾಶ್ ಶೆಟ್ಟಿ, ಉದ್ಯಮಿ ನಾಗಯ್ಯ ಶೆಟ್ಟಿ, ಶ್ರೀ ನಾಗು ಕುಲಾಲ್, ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್, ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕೆತ್ತೂರು, ಕುಂದಾಪುರ ವಲಯ ಹಾಗೂ ಶ್ರೀ ರಮೇಶ್ ವಕ್ವಾಡಿ, ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಮೋಹನ್ ಬೆಳ್ಮಣ್ ನಿರೂಪಿಸಿ ಶ್ರೀ ಗುರುಪ್ರಸಾದ್ ಎಚ್., ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೊಸಂಗಡಿ ಸ್ವಾಗತಿಸಿ ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆಗೈದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿಕೊಟ್ಟರು ಸುಮಾರು 136 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.