ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ದಿಟ್ಟಮಹಿಳೆ ; ಎನ್.ಬಿ.ಗೋಪಾಲಗೌಡ

ಕೋಲಾರ ಜನವರಿ 6 : ಭಾರತೀಯ ಚರಿತ್ರೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೂರ ಎಪ್ಪತ್ತು ವರ್ಷಗಳ ಹಿಂದೆಯೇ ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ. ಅಂದಿನ ಸಮಾಜದಲ್ಲಿ ಎದುರಾದ ಎಲ್ಲಾ ವಿರೋಧಗಳನ್ನು ಲೆಕ್ಕಿಸದೆ ಛಲಬಿಡದ ಧರಣಿಯಂತೆ ಹೆಣ್ಣು ಮಕ್ಕಳ ಅಕ್ಷರಕ್ರಾಂತಿಗೆ ದೀಪ ಬೆಳಗಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎನ್.ಬಿ.ಗೋಪಾಲಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೋಲಾರ ಜಿಲ್ಲಾ ಘಟಕ ಹಾಗೂ ಅಕ್ಷರದವ್ವ ಫಾತಿಮಾ ಶೇಖ್ ಪ್ರತಿμÁ್ಠನವು ಸಹಯೋಗದಲ್ಲಿ ಹಮ್ಮಿಕೊಂಡಿರುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಫಾತಿಮಾ ಶೇಖ್ ಸಪ್ತಾಹ ಸಂಭ್ರಮದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಭಾರತೀಯ ಮುಸ್ಲಿಂ ಸಮಾಜದಲ್ಲಿ ಹುಟ್ಟಿ ಫುಲೆ ದಂಪತಿಗಳ ಜೊತೆಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಬಂಡಾಯದ ಕಹಳೆ ಊದುದ ಧೀಮಂತ ಮಹಿಳೆ ಫಾತಿಮಾ ಶೇಖ್. ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಇವರಿಬ್ಬರೂ ಗೆಳತಿಯರಾಗಿ, ಸಹಪಾಠಿಗಳಾಗಿ, ಭಾರತದ ಮೊದಲ ಶಿಕ್ಷಕಿಯರಾಗಿ ಅಕ್ಷರ ದೀವಿಗೆ ಬೆಳಗಿಸಲು ಹೋರಾಟ ನಡೆಸಿದವರು. ಸಾವಿತ್ರಿಬಾಯಿ ಹುಟ್ಟಿದ್ದು ಜನವರಿ 3, ಫಾತಿಮಾ ಶೇಖ್ ಹುಟ್ಟಿದ್ದು ಜನವರಿ 9. ಇವರಿಬ್ಬರ ಜನ್ಮ ದಿನಾಚರಣೆಗಳನ್ನು ಮಾಡುವ ನಿಟ್ಟಿನಲ್ಲಿ ಮೂರರಿಂದ ಒಂಭತ್ತರವರೆಗೆ ಏಳು ದಿನಗಳ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಶಿಕ್ಷಕರಾದ ಜಾಬಿರ್ ಅಹಮ್ಮದ್‍ರವರು ಮಾತನಾಡುತ್ತ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಮಹಿಳೆಯೊಬ್ಬಳು ಸುಶಿಕ್ಷಿತಳಾದರೆ ತನ್ನ ಇಡೀ ಮನೆ ಕುಟುಂಬವನ್ನು ವಿದ್ಯಾವಂತರನ್ನಾಗಿ ಮಾಡುತ್ತಾಳೆ. ನಾಲ್ಕು ಗೋಡೆಗಳ ನಡುವೆ ಕುಳಿತಿದ್ದ ಹೆಣ್ಣು ಇವತ್ತು ಅಕ್ಷರಸ್ತಳಾಗಿ ಸಮಾಜದ ಎಲ್ಲಾ ಸ್ತರದಲ್ಲಿ ಸಾಧನೆ ಮಾಡುತ್ತಿದ್ದಾಳೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿ.ಶಿವಕುಮಾರ್ ಅವರು ಮಾತನಾಡುತ್ತ ಕಳೆದ ವರ್ಷದಿಂದ ನಾವು ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಅವರು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಈ ಬಾರಿ ನಾವು ಸಪ್ತಾಹ ಸಂಭ್ರಮವನ್ನು ಹಮ್ಮಿಕೊಳ್ಳುವ ಮೂಲಕ ಏಳು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದು ಉಪನ್ಯಾಸ, ಕವಿಗೋಷ್ಠಿ, ಪ್ರಶಸ್ತಿ, ಪುಸ್ತಕ ಓದು ಹೀಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಅವರ ಸ್ಮರಣೆ ಮಾಡುವ ಮೂಲಕ ಜನ ಸಾಮಾನ್ಯರ ಬಳಿಗೆ ಇವರ ಚರಿತ್ರೆಯನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಕವಿಗಳಾದ ಕಾ.ಹು.ಚಾನ್‍ಪಾಷ ಅವರು ಮಾತನಾಡುತ್ತ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ರವರು ಇವತ್ತು ನಮಗೆ ಆದರ್ಶವಾಗಬೇಕಾದ ತುರ್ತು ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇವರಿಬ್ಬರನ್ನೂ ನಾವು ಜೊತೆಗಿಟ್ಟೇ ನೋಡಬೇಕು. ನೂರ ಎಪ್ಪತ್ತು ವರ್ಷಗಳ ಹಿಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಜ್ಜೆಗಳನಿಟ್ಟಿದ್ದೇ ಒಂದು ಬಂಡಾಯ. ನೋವು, ದುಃಖ, ಅವಮಾನಗಳನ್ನು ಸಹಿಸಿಕೊಂಡು ಸೌಹಾರ್ದ ಬಹುತ್ವ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಅವರು ಅಂದೇ ಅಕ್ಷರದ ದೀವಿಗೆಯನ್ನು ಮನೆಮನೆಗೆ ತಪುಪಿಸುವ ಕಾಯಕವನ್ನು ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿ.ಆರ್.ಪಿ.ಗಳಾದ ಜಮೀಲ್ ಅಹಮ್ಮದ್ ಹಾಗೂ ಜಬೀವುಲ್ಲಾ ಶರೀಪ್ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಶಾಹೀನ್ ತಾಜ್.ಹೆಚ್.ಎ, ಮಂಜುಳ ಕೊಂಡರಾಜನಹಳ್ಳಿ, ಕೆ.ವಿ.ನೇತ್ರಾವತಿ ಹಾಗೂ ಎನ್.ಸರಸ್ವತಿ ಅವರ ಸಾಮಾಜಿಕ, ಶೈಕ್ಷಣಿಕ, ಹೋರಾಟಗಳ ಸಾಧನೆಗಳನ್ನು ಗುರುತಿಸಿ ಸಾವಿತ್ರಿಬಾಯಿ ಫುಲೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸೈಯದ್ ಆಸಿಫ್ ಅಹಮ್ಮದ್, ಕೌಸರ್ ಶಬೀನ್, ಶಾಹಿಸ್ತ ತಸ್ನೀಮ್ ತಾಜ್, ಆಮಿರಾ ಫಾತಿಮಾ, ಸಲ್ಮಾ ಕೌಸರ್ ಮೊದಲಾದವರು ಉಪಸ್ಥಿತರಿದ್ದರು.