ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರ ಮಹೋತ್ಸವದ ಸಂಭ್ರಮಾಚರಣೆ

ಕುಂದಾಪುರ,ಜ.1 : ಅರವತ್ತರ ದಶಕದಲ್ಲೇ ರೈತರ ಹಿತಾಸಕ್ತಿಗಳಿಗಾಗಿ ಶ್ರಮಿಸಿದ ಉದಾತ್ತ ಚೇತನ ಯಡ್ತೆರೆ ಮಂಜಯ್ಯ ಶೆಟ್ಟರು. ಆಗಿನ ಎನ್ ಇ ಎಸ್ ಯೋಜನೆಯಂತೆ ಅವರು ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ದೂರ ದೃಷ್ಟಿಯಿಂದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘವನ್ನು ಸ್ಥಾಪಿಸಿದರು. ತಲ್ಲೂರಿನಲ್ಲಿ ಸುಸಜ್ಜಿತ ಅಕ್ಕಿ ಗಿರಣಿ ಪ್ರಾರಂಭಿಸಿ, ಲೆವಿ ಸಂಗ್ರಹಿತ ಬತ್ತದಿಂದ ಉತ್ತಮ ದರ್ಜೆಯ ಅಕ್ಕಿ ಉತ್ಪಾದಿಸುವ ವ್ಯವಸ್ಥೆ ಮಾಡಿದ್ದರು. ಕುಂದಾಪುರ ಪರಿಸರದಲ್ಲಿ ಮಂಜಯ್ಯ ಶೆಟ್ಟರಿಂದ ಪ್ರಾರಂಭಿಸಲ್ಪಟ್ಟ ಹಲವು ಸಂಸ್ಥೆಗಳು ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲೊಂದು ಇದೀಗ ವಜ್ರ ಮಹೋತ್ಸವವಾಚರಿಸುತ್ತಿರುವ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ. ಇದು ಇನ್ನೂ ಅಭಿವೃದ್ಧಿ ಹೊಂದಿ ರೈತರ ಏಳಿಗೆಗೆ ಕಾರಣವಾಗಲಿ ಎಂದು ಹಿರಿಯ ಮುತ್ಸದ್ದಿ, ಧಾರ್ಮಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

     ಶನಿವಾರ ಡಿಸೆಂಬರ್ 31 ರಂದು ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರ ಮಹೋತ್ಸವವನ್ನು ದೀಪ ಬೆಳಗಿ ಚಾಲನೆಗೊಳಿಸಿ ಅವರು ಶುಭ ಹಾರೈಸಿದರು.

    ಮುಖ್ಯ ಅತಿಥಿ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ,  ರೈತಾಪಿ ವರ್ಗದ ಆರ್ಥಿಕ ಸಬಲೀಕರಣ, ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಯಡ್ತರೆ ಮಂಜಯ್ಯ ಶೆಟ್ಟರು ಅರವತ್ತರ ದಶಕದಲ್ಲಿ ಸಹಕಾರಿ ಬೀಜ ಬಿತ್ತಿದ್ದರು. ಅದು ಇಂದು ಹೆಮ್ಮರವಾಗಿ ಬೆಳೆದು ಸಹಸ್ರಾರು ರೈತರಿಗೆ ಪ್ರಯೋಜನವಾಗಿದೆ. ಕುಂದಾಪುರ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ಅಪಾರ,ಕುಂದಾಪುರವೇ ಮಂಗಳೂರು ಉಡುಪಿ ಉಭಯ ಜಿಲ್ಲ್ಗೆಗಳಲ್ಲಿ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಪ್ರೇರಣೆ ಆಗಿದೆ ರಾಜಕೀಯ, ಇನ್ನಿತರ ತಾರತಮ್ಯವಿಲ್ಲದೆ ಸಹಕಾರ ತತ್ವದಡಿ ಕಾರ್ಯಾಚರಿಸುವ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

    ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ಸಹಕಾರಿ ಸಂಘಗಳ ಸಹಾಯಕ  ನಿಬಂಧಕಿ ಲಾವಣ್ಯ ಕೆ. ಆರ್., ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ ಮಾತನಾಡಿ ಶುಭ ಹಾರೈಸಿದರು.

     ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ. ಎನ್. ವಜ್ರ ಮಹೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.  ತನ್ನ ಸೇವಾವಧಿಯಲ್ಲಿ ನೋಡಿದ ಅರವತ್ತರ ಸಂಭ್ರಮದ ವರ್ಷಾಚರಣೆಯನ್ನು ನಡೆಸುತ್ತಿರುವ ಪ್ರಥಮ ಸಂಸ್ಥೆ ಇದು ಎಂದರು.

ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಅಧ್ಯಕ್ಷರುಗಳನ್ನು, ನಿವೃತ್ತ ನೌಕರರನ್ನು,ಸಂಘಕ್ಕೆ ಸಹಕರಿಸಿದ, ಭೂ ಮಾಪಕ, ಚಿನ್ನ ಮಾಪಕರನ್ನು, ಬೈಂದೂರು ಸಂಘದ ಕಟ್ಟಡ ಮಾಲೀಕರನ್ನು, ಟ್ರಾನ್ಸಪೊರ್ಟರಗಳನ್ನು ಸನ್ಮಾನಿಸಲಾಯಿತು.

    ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ’ಸಂಸ್ಥಾಪಕರ ದೂರ ದ್ರಷ್ಟಿತ್ವದಿಂದ ಸ್ಥಾಪಿತವಾದ ಈ ಸಂಸ್ಥೆ ಇಂದು ವಜ್ರಮಹೋತ್ಸವವನ್ನು ಆಚರಿಸುತ್ತದೆ, ಇದರ ಹಿಂದೆ, ಹಿಂದಿನ ಎಲ್ಲಾ ಆಡಳಿತ ಮಂಡಳಿ, ಸೇವಾ ಸಿಬಂದಿ ಕಾರಣವಾಗಿದೆ.  ಆಡಳಿತ ಮಂಡಳಿ ಸಿಬಂದಿ ಜೊತೆಕೂಡಿ ಸೇವೆ ನೀಡಿದರೆ ಸಂಘಗಳು ಪ್ರಗತಿ ಸಾಧಿಸುತ್ತವೆ. ರೈತರ ಶ್ರೇಯೊಭಿವ್ರದ್ದಿಗಾಗಿ ಹುಟ್ಟು ಹಾಕಿದ ಈ ಸಂಸ್ಥೆ ಮುಂದೆ ಇನ್ನೂ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇನ್ನು ಕೆಲವೇ ತಿಂಗಳಲ್ಲಿ ರೈತರು ಬೆಳೆದ ತರಕಾರಿಗಳನ್ನು ರೈತರು ನೇರವಾಗಿ ಮಾರಾಟ ಮಾಡುವಂತಹ, ತರಕಾರಿ ಮಾರುಕಟ್ಟೆ ಕುಂದಾಪುರದ ಸಂಗಮ್ ಹತ್ತಿರ ಆರಂಭವಾಗುತ್ತದೆ’ ಎಂದು ತಿಳಿಸಿದರು.

    ನಿರ್ದೇಶಕ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಶೋಕ್ ಕುಮಾರ್ ಶೆಟ್ಟಿ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಶೋಭಾಕೃಷ್ಣ,  ನಿರ್ದೇಶಕರಾದ ಮೋಹನ್ ದಾಸ್ ಶೆಟ್ಟಿ, ಮಲ್ಯಾಡಿ, ಕೆ. ಮೋಹನ್ ಪೂಜಾರಿ, ಪ್ರಭಾಕರ ಶೆಟ್ಟಿ, ಕೆ. ಸುಧಾಕರ ಶೆಟ್ಟಿ, ರವಿ ಗಾಣಿಗ, ಆನಂದ ಬಿಲ್ಲವ, ಎಚ್. ದಿನಪಾಲ್ ಶೆಟ್ಟಿ, ಎಂ. ಮಹೇಶ್ ಹೆಗ್ಡೆ, ಎಚ್. ಚಂದ್ರಶೇಖರ ಶೆಟ್ಟಿ ಚಿತ್ತೂರು, ಕೆ. ಭುಜಂಗ ಶೆಟ್ಟಿ ಮತ್ತು ಎಸ್. ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ವಂದಿಸಿದರು.ಆರ್ ಎನ್ ಎಸ್ ಶಾಲಾ ಹಿಂದಿ ಶಿಕ್ಷಕಿ  ಜಯಶೀಲಾ ಕಾಮತ್ ಮತ್ತು ಆರ್.ಜೆ. ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ಭೋಜನದ ನಂತರ ಸಂಸ್ಥೆಯ ಸ್ಥಾಪಕ ಯಡ್ತರೆ ಮಂಜಯ್ಯ ಶೆಟ್ಟಿ ಕುರಿತಾದ ವಿಚಾರಗೋಷ್ಠಿ ನಡೆಯಿತು.ವಿಚಾರಗೋಷ್ಟಿಯಲ್ಲಿ ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ ಇವರು ಸಂಸ್ಮರಣೆಯನ್ನು ನಡೆಸಿಕೊಟ್ಟರು. ಸಂಘದ ಅಧ್ಯಕ್ಷರಾದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಮಾನ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕರ್ನಾಟಕದ ಆಹಾರ ನಿಗಮಗದ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದು ಮಾಜಿ ಶಾಸಕಾರಾಡಾ ಗೋಪಾಲ ಪೂಜಾರಿ, ಮಾಜಿ ಶಾಸಕರಾದ ಬಿ.ಅಪ್ಪಣ ಹೆಗ್ಡೆ ಭಾಗವಹಿಸಿದ್ದು,ಯಡ್ತರೆ ಮನೆಯ ಎಮ್.ಅಶೋಕ್ ಕುಮಾರ್ ಶೆಟ್ಟಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಅವಿಭಜಿತ ಕುಂದಾಪುರ ತಾಲೂಕು ಕೃಷಿ ಪತ್ತಿನ ಸಹಕಾರಿಗಳ ಅಧ್ಯಕ್ಷರು ಮತ್ತು  ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.