ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸಿ ಬದಲಾವಣೆ ತರಬೇಕು :ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ

ಶ್ರೀನಿವಾಸಪುರ: ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸುವುದರ ಮೂಲಕ ಬದಲಾವಣೆ ತರಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಪಟ್ಟಣದ ವೆಂಕಟೇಶ್ವರ ನರ್ಸಿಂಗ್ ಹೋಂ ಸಭಾಂಗಣದಲ್ಲಿ ತಾಲ್ಲೂಕು ಎಎಪಿ ಘಟಕದ ವತಿಯಿಂದ ಏರ್ಪಡಿಸಿದ್ದ ಕುವೆಂಪು ಜನ್ಮ ದಿನಾಚರಣೆ ಹಾಗೂ ಪರಿವರ್ತನೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ, ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜನ ಪ್ರತಿನಿಧಿಗಳಿಗೆ ಋಣ ಮುಕ್ತತೆ ಪರಿಕಲ್ಪನೆ ಇರಬೇಕು. ಅವರು ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕು. ಆದರೆ ಮತದಾರರಲ್ಲಿ ಋಣ ಮುಕ್ತತೆ ಪರಿಕಲ್ಪನೆ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಜೈಲಿಗೆ ಹೋಗಿ ಬಂದ ರಾಜಕಾರಣಿಗಳನ್ನು ಮತದಾರ ಬೆಂಬಲಿಸುವುದು ಋಣ ಮುಕ್ತತೆಗೆ ಉತ್ತಮ ಉದಾಹರಣೆ. ಜನಪ್ರತಿನಿಧಿಯೊಬ್ಬರು ಮೂರು ತಲೆಮಾರಿಗೆ ಸಾಕಾಗುಷ್ಟು ಸಂಪಾದನೆ ಮಾಡಿಕೊಳ್ಳಲು ಸಹಕರಿಸಿದ, ಕುಟುಂಬವನ್ನು ಬೆಂಬಲಿಸಿ ಮಾತನಾಡಿರುವುದು ಬೇಸರ ತರಿಸುವ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಮತ ಚಲಾಯಿಸಲು ಅಭ್ಯರ್ಥಿಯ ಜಾತಿ, ಮತ, ಭಾಷೆ, ಆಮಿಷ ಮಾನದಂಡವಾಗಬಾರದು. ಅಭ್ಯರ್ಥಿಯ ಸಾಮಾಜಿಕ ನಿಲುವು ಹಾಗೂ ಶುದ್ಧ ಹಸ್ತ ನೋಡಿ ಮತ ಚಲಾಯಿಸಬೇಕು. ಮತದಾನ ಮಾಡುವಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಯುವ ಮತದಾರರು ಎಚ್ಚೆತ್ತುಕೊಳ್ಳಬೇಕು. ಸಂವಿಧಾನದ ಆಶಯಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಎಎಪಿ ಮುಖಂಡ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷವಾಗಿ ಪರಿವರ್ತನೆ ಕ್ಯಾಲೆಂಡರ್ ರಚಿಸಲಾಗಿದೆ. ರೋಗ ಹರಡದಂತೆ, ಅಪೌಷ್ಠಿಕತೆ ತಡೆಯಲು ನೆರವಾಗುವಂತೆ ಸಲಹೆ ಸೂಚನೆ ನೀಡಲಾಗಿದೆ. ಹಿರಿಯವಾಡಿ ತೆರೆಯಬೇಕಾದ ಅಗತ್ಯ ಕುರಿತು ಹೇಳಲಾಗಿದೆ. ಜನರು ಈ ಕ್ಯಾಲೆಂಡರ್ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರೊ.ದೊಡ್ಡರಂಗೇಗೌಡ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಗೋವಿಂದಹಳ್ಳಿ ಕೃಷ್ಣೇಗೌಡ, ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ಡಾ. ವೈ.ಸಿ.ಬೀರೇಗೌಡ, ಡಾ. ಶುಭ, ಕೆಸಿ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಸಿ.ಮುನೇಗೌಡ, ಡಿಎಸ್‍ಎಸ್ ಮುಖಂಡ ತಿಮ್ಮಯ್ಯ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಕೃಷ್ಣಾರೆಡ್ಡಿ, ಜಿಲ್ಲಾ ಎಎಪಿ ಅಧ್ಯಕ್ಷ ಸುರೇಶ್ ಬಾಲಕೃಷ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಮಹತ್ವ ಹೊಂದಿರುವ ಪರಿವರ್ತನೆ ಕ್ಯಾಲೆಂಡರ್ ಉಚಿತವಾಗಿ ವಿತರಿಸಲಾಯಿತು.