ಶ್ರೀನಿವಾಸಪುರ: ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಪರಿಹಾರ ಪಡೆದುಕೊಳ್ಳಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.
ತಾಲ್ಲೂಕಿನ ಮಟ್ಟಕನ್ನಸಂದ್ರ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಆಯಾ ಗ್ರಾಮದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು, ಅಗತ್ಯ ಇರುವ ಕಡೆ ರಸ್ತೆ ಚರಂಡಿ ನಿರ್ಮಿಸಲು, ವಿದ್ಯುತ್ ಪರಿವರ್ತಕ ಬದಲಿಸಲು ಹಾಗೂ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾಮಸ್ಥರ ಹಿತ ದೃಷ್ಟಿಯಿಂದ ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಉಪ ತಹಶೀಲ್ದಾರ್ ಬಲರಾಮಚಂದ್ರೇಗೌಡ, ಪಿಡಿಒ ಚಲಪತಿ, ಕಂದಾಯ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ವಿನೋದ್, ಗ್ರಾಮ ಲೆಕ್ಕಾಧಿಕಾರಿ ಸ್ವಾತಿ ಭಂಡಾರಿ, ಬೆಸ್ಕಾಂ ಇನ್ಸ್‍ಪೆಕ್ಟರ್ ನಂಜುಂಡೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ರಜನಿ ರಮೇಶ್, ಉಪಾದ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಕಾರಂಗಿ ರಮೇಶ್, ಡಾ. ಮೇಘಶ್ಯಾಂ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಗಿರೀಶ್, ಶ್ರೀನಿವಾಸಯ್ಯ, ನಾಗಾರ್ಜುನ ಬಾಬು, ಹರೀಶ್, ವೆಂಕಟಾಚಲಪತಿ, ವಿರೂಪಾಕ್ಷಪ್ಪ ಇದ್ದರು.