ರಾಜ್ಯದ ಸರ್ವತೋಮು ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಜೆಡಿಎಸ್‍ನ್ನು ಬೆಂಬಲಿಸಬೇಕು : ನಿಖಿಲ್ ಕುಮಾರಸ್ವಾಮಿ

ಶ್ರೀನಿವಾಸಪುರ: ರಾಜ್ಯದ ಸರ್ವತೋಮು ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ್ನು ಬೆಂಬಲಿಸಬೇಕು ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಸ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಆಡಳಿತದಲ್ಲಿ ದೇಶ ಅಥವಾ ರಾಜ್ಯ ಅಭಿವೃದ್ಧಿ ಕಂಡಿಲ್ಲ. ಬಿಜೆಪಿ ಮತೀಯ ಭಾವನೆ ಕೆರಳಿಸುವುದರಲ್ಲಿ ನಿರತವಾಗಿದೆ. ಆಡಳಿತ ನಡೆಸಿದ ಕಾಂಗ್ರೆಸ್ ಮುಖಂಡರು ಮೂರು ತಲೆಮಾರಿಗೆ ಸಾಕಾಗುಷ್ಟು ಸಂಪತ್ತು ಗಳಿಸಿದ್ದಾರೆ. ಈ ಮಾತು ಕಾಂಗ್ರೆಸ್ ಮುಖಂಡರ ಬಾಯಿಂದಲೇ ಬಂದಿದೆ. ಇಂಥ ಪರಿಸ್ಥಿತಿಯಲ್ಲಿ ಜೆಡಿಎಸ್ ಅತ್ಯುತ್ತಮ ಪರ್ಯಾಯವಾಗಿದೆ ಎಂದು ಹೇಳಿದರು.

ಕೆರೆಗಳಗೆ ಕೆಸಿ ವ್ಯಾಲಿ ನೀರು ಹರಿಸುವುದರ ಮೂಲಕ ಜನರ ಆರೋಗ್ಯದ ಮೇಲೆ ಬರೆ ಎಳೆಯಲಾಗಿದೆ. ಸಮರ್ಪಕವಾಗಿ ಶುದ್ಧೀಕರಿಸದೆ ಹರಿಸುತ್ತಿರುವ ನೀರಿನಿಂದ ಜನರು ಅಪಾಯಕಾರಿ ಕಾಯಿಲೆಗೆ ತುತ್ತಾಗುವ ಸಂಭವ ಇದೆ ಎಂದು ಹೇಳಿದರು.

ಗಡಿ ಭಾಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿರುವುದು ಸ್ವಾಗತಾರ್ಹ. ಇಲ್ಲಿನ ಜನರ ಕನ್ನಡ ಪ್ರೇಮ ಅನುಕರಣೀಯ. ಆದರೆ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಕನ್ನಡ ಬದುಕಿನ ಭಾಗವಾಗಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ನಾಡು ನುಡಿ ರಕ್ಷಣೆ ಎಲ್ಲರ ಹೊಣೆ. ಅದಕ್ಕೆ ಗಡಿನಾಡು ನಡುನಾಡು ಎಂಬ ಭೇದವಿಲ್ಲ. ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರು. ಆದ್ದರಿಂದ ಇಲ್ಲಿನ ನೆಲ, ಜಲ ಹಾಗೂ ಭಾಷೆ ಬಗ್ಗೆ ಗೌರವ ಭಾವನೆ ಹೊಂದಿರಬೇಕು ಎಂದು ಹೇಳಿದರು.

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಮುಖಂಡರಾದ ಮಂಜುನಾಥರೆಡ್ಡಿ, ಬಿ.ವೆಂಕಟರೆಡ್ಡಿ, ಎಂ.ಶ್ರೀನಿವಾಸಪ್ಪ, ಜಯಲಕ್ಷ್ಮಿ, ಕೃಷ್ಣಾರೆಡ್ಡಿ, ಅಪ್ಪೂರು ರಾಜು, ಆನಂದಗೌಡ, ಪೂಲ ಶಿವಾರೆಡ್ಡಿ, ಸಿಎಂಆರ್ ಶ್ರೀನಾಥ್, ಸುಧಾಕರ್, ಡಾ. ವಿ.ಎಂ.ರಮೇಶ ಬಾಬು, ಎಸ್.ಆರ್.ಶ್ರೀನಿವಾಸ್, ಸತ್ಯನಾರಾಯಣ, ಕಾರ್ ಬಾಬು, ಇಮ್ರಾನ್ ಪಾಷ, ಎನ್.ಎಂ.ನೂರ್‍ಅಹ್ಮದ್, ನಜ್ಮ ನಜೀರ್, ಜಬೀರ್ ಅಹ್ಮದ್ ಇದ್ದರು.