ಜಿಲ್ಲೆಗೆ ಬಂದಿರುವ ಬೃಹತ್ ಕಂಪನಿಗಳು ತಮ್ಮ ಸಿಎಸ್‍ಆರ್ ನಿಧಿಯಿಂದ
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕಾರ ನೀಡಬೇಕು-ಎಸ್ಪಿ ಡಿ.ದೇವರಾಜ್

ಕೋಲಾರ:- ಜಿಲ್ಲೆಯಲ್ಲಿ ಆರಂಭವಾಗಿರುವ ಬೃಹತ್ ಕಂಪನಿಗಳು ತಮ್ಮ ಸಿಎಸ್‍ಆರ್ ನಿಧಿಯಿಂದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮನವಿ ಮಾಡಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಗೆ ವಿಸ್ಟ್ರಾನ್ ಕಂಪನಿ ಅಧಿಕಾರಿಗಳ ಮನವೊಲಿಸಿ ಶಾಲೆಗೆ ಕರೆತಂದಿದ್ದ ಎಸ್ಪಿಯವರು ಶಾಲೆ ಆವರಣದಲ್ಲಿ ಕಳೆದ ಬಾರಿ ಬಿದ್ದ ಮಳೆಗೆ ನೆಲಸಮವಾಗಿದ್ದ ಎರಡು ಕೊಠಡಿಗಳನ್ನು ತೋರಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳಿಗೆ ಸರ್ಕಾರ ಸೌಲಭ್ಯ ನೀಡುತ್ತಿದೆ ಆದರೆ ಇಂದಿ ಸ್ಪರ್ಧಾತ್ಮಕ ಪೈಪೋಟಿಗೆ ಅನುಗುಣವಾಗಿ ಬಲವರ್ಧನೆಗೆ ದಾನಿಗಳು, ಕಂಪನಿಗಳ ನೆರವು ಅಗತ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ ನರಸಾಪುರ,ವೇಮಗಲ್ ಭಾಗದಲ್ಲಿ ಇರುವ ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಮುಂದಾಗಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸುವ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸುವುದು ಜವಾಬ್ದಾರಿಯಾಗಿದೆ, ಸರ್ಕಾರ ನೀಡುವ ಸೌಲಭ್ಯಗಳ ಜತೆಗೆ ಕಂಪನಿಗಳು ಸಿಎಸ್‍ಆರ್ ನಿಧಿ ಕೊಡುಗೆಯಾಗಿ ನೀಡಿದರೆ ಶಾಲೆಗಳ ಆಕರ್ಷಣೀಯವಾಗಿ ಮಕ್ಕಳು ಸರ್ಕಾರಿ ಶಾಲೆಗಳತ್ತ ಬರಲು ಸಹಕಾರಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತ, ಆತಂಕಕಾರಿ ಬೆಳವಣಿಗೆಯಾಗಿದೆ, ಪ್ರತಿಯೊಬ್ಬರಲ್ಲೂ ಕಾನ್ವೆಂಟ್ ವ್ಯಾಮೋಹ ಇದಕ್ಕೆ ಕಾರಣವಾಗಿದೆ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ನೀಡುವ ಮೂಲಕ ಪೋಷಕರ ಮನಸೆಳೆಯಬೇಕಿದೆ ಎಂದ ಅವರು, ಕ್ಯಾಲನೂರು ಕೆಪಿಎಸ್ ಶಾಲೆಯಲ್ಲಿ 426 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇದೊಂದು ದೊಡ್ಡ ಶಾಲೆಯಾಗಿದೆ, ಇಲ್ಲಿಗೆ ಸೌಲಭ್ಯಗಳು ಹರಿದುಬರಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ಉನ್ನತ ಸ್ಥಾನದಲ್ಲಿದ್ದಾರೆ, ಜನತೆಗೆ ಸರ್ಕಾರಿ ಶಾಲೆಗಳ ಕುರಿತು ಇರುವ ಕೀಳಿರಿಮೆ ಹೋಗಬೇಕು, ಈ ನಿಟ್ಟಿನಲ್ಲಿ ಶಿಕ್ಷಕರ ಪರಿಶ್ರಮವೂ ಅಗತ್ಯವಿದೆ ಎಂದ ಅವರು, ಇಲ್ಲೇ ನುರಿತ ಶಿಕ್ಷಕರಿದ್ದಾರೆ ಇದನ್ನು ಪೋಷಕರು ಅರಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಸ್ಟ್ರಾನ್ ಕಂಪನಿ ಅಧಿಕಾರಿ ನಾಗರಾಜ್ ಮಾತನಾಡಿ ಕಂಪನಿಯ ಆಡಳಿತವರ್ಗದೊಂದಿಗೆ ಮಾತನಾಡಿ, ಸಿಎಸ್‍ಆರ್ ನಿಧಿಯ ಹಣವನ್ನು ಕ್ಯಾಲನೂರು ಶಾಲೆಗೆ ಒದಗಿಸುವುದಾಗಿ ಭರವಸೆ ನೀಡಿದರು.
ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಪ್ರಾರ್ಥನಾ ಸ್ಥಳಕ್ಕಾಗಿ ಸಿಮೆಂಟ್ ಮೈದಾನ ಮಾಡಿಕೊಡುವ ಬಗ್ಗೆ ಹಾಗೂ ಐಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಡವ ಬಗ್ಗೆ ಚರ್ಚಿಸಲಾಯಿತು ಹಾಗೂ ವಿಸ್ಟ್ರೋನ್ ಕಂಪನಿಯ ಸಹಯೋಗದಲ್ಲಿ ನಿರ್ಮಿಸಿ ಕೊಡುವ ಬಗ್ಗೆ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು, ಎಸ್‍ಡಿಎಂಸಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಎಸ್ಪಿ ದೇವರಾಜ್, ಶಾಲೆಗೆ ಇರುವ ಅಗತ್ಯತೆಗಳ ಕುರಿತು ಚರ್ಚಿಸಿ ಇದೆಲ್ಲವನ್ನೂ ವಿಸ್ಟ್ರಾನ್ ಸಿಎಸ್‍ಆರ್ ನಿಧಿಯಲ್ಲಿ ಪೂರೈಸಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎಸ್ಪಿ ಡಿ.ದೇವರಾಜ್ ಹಾಗೂ ವಿಸ್ಟ್ರನ್ ಕಂಪನಿ ಅಧಿಕಾರಿ ನಾಗರಾಜ್‍ರನ್ನು ಶಾಲೆಯ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಶಿವರಾಜ್, ಗ್ರಾ.ಪಂ ಅಧ್ಯಕ್ಷೆ ಸಹೀದಾ ಜಂಷೀರ್ ಪಾಷ, ಉಪಾಧ್ಯಕ್ಷ ರತ್ನಮ್ಮ ನಾರಾಯಣಸ್ವಾಮಿ, ಗ್ರಾ.ಪಂ ಸದಸ್ಯ ನವೀನ್, ರಾಜೇಂದ್ರ ಪ್ರಸಾದ್, ಸದಸ್ಯರಾದ ಸುರೇಶ್,ರಮೇಶ್, ಲೋಕೇಶ್, ನವೀನ್, ರಾಜೇಂದ್ರಪ್ರಸಾದ್, ಬಾಬಾ ಸಾಬ್, ಜಂಷೀರ್‍ಪಾಷ, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಮೂರ್ತಿ, ಉಪಾಧ್ಯಕ್ಷ ರಾಮಾಂಜಿನಪ್ಪ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.