ಉಪ್ಪಿನಕುದ್ರುವಿನಲ್ಲಿ ಶಿರೂರು ಫಣಿಯಪ್ಪಯ್ಯ ಸಂಸ್ಮರಣೆ

ಶಿರೂರು ಫಣಿಯಪ್ಪಯ್ಯ ಸಂಸ್ಮರಣಾ ಕಾರ್ಯಕ್ರಮ 20 -11 -2022 ರಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 77 ನೆಯ ಕಾರ್ಯಕ್ರಮವಾಗಿ ಅಕಾಡೆಮಿಯ ಸಭಾಂಗಣದಲ್ಲಿ ನಡೆಯಿತು. ಈಶಾನ್ಯ ರಾಜ್ಯಗಳ ವಿಶ್ರಾಂತ ರಾಜ್ಯಪಾಲ ಶ್ರೀ ಪದ್ಮನಾಭ ಆಚಾರ್ಯ ದಂಪತಿಗಳ ಉಪಸ್ಥಿತಿಯಲ್ಲಿ ಹಿರಿಯ ಯಕ್ಷಗಾನ ಕವಿ ಕಂದಾವರ ರಘುರಾಮ ಶೆಟ್ಟಿಯವರಿಗೆ ಫಣಿಗಿರಿ ಪ್ರಶಸ್ತಿ-2022 ಪ್ರದಾನ, ಹಿರಿಯ ಯಕ್ಷಗಾನ ವಿದ್ವಾನ್ಸ ಡಾ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲ್ಪಟ್ಟ ಶಿರೂರು ಫಣಿಯಪ್ಪಯ್ಯ ವಿರಚಿತ ಐದು ಯಕ್ಷಗಾನ ಪ್ರಸಂಗಗಳ ಸಂಪುಟ ಬಿಡುಗಡೆ, ಶಿರೂರು ಫಣಿಗಿರಿ ಸಂಗ್ರಹದ 3000 ಪುಟಗಳ ತಾಳೆಗರಿ ಗ್ರಂಥ ಹಾಗೂ ಇತರ ಹಳೆಯ ಯಕ್ಷಗಾನ ಹಸ್ತಪ್ರತಿ , ಮುದ್ರಿತ ಪುಸ್ತಕಗಳ ಪ್ರದರ್ಶನ, ಹಿರಿಯ ಭಾಗವತ ಹೆರಾಂಜಾಲು ಗೋಪಾಲ ಗಾಣಿಗ ಮತ್ತು ಸಂಗಡಿಗರಿಂದ ಯಕ್ಷ ಗಾನ ವೈಭವ, ಭಾಸ್ಕರ ಕೊಗ್ಗ ಕಾಮತ ತಂಡದವರಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೈಸೂರಿನಿಂದ ಆಗಮಿಸಿದ ಡಾ ಕಬ್ಬಿನಾಲೆ ವಸಂತ ಭಾರದ್ವಾಜಮುಖ್ಯ ಅತಿಥಿಯಾಗಿ ಭಾಗವಹಿಸಿ ಯಕ್ಷಗಾನ ಸಾಹಿತ್ಯ ಕೃತಿಗಳನ್ನು ಸರ್ಕಾರ ಮತ್ತು ಕನ್ನಡ ಸಾಹಿತ್ಯ ವಿದ್ವಾನ್ಸರು ನಿರ್ಲಕ್ಸಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ ಶಿರೂರು ಫಣಿಯಪ್ಪಯ್ಯನವರ ಯಕ್ಷಗಾನ ಪ್ರಸಂಗಗಳು ಅವರ ನಿಧನದ ೧೮ ವರ್ಷಗಳ ನಂತರವಾದರೂ ಪ್ರಕಟವಾಗಿ ಯಕ್ಷಲೋಕಕ್ಕೆ ಸಮರ್ಪಿತವಾಗುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಫಣಿಗಿರಿ ಪ್ರಶಸ್ತಿ ಸ್ವೀಕರಿಸಿದ ಕಂದಾವರ ರಘುರಾಮ ಶೆಟ್ಟಿ ಮತ್ತು ಕಾರ್ಯಕ್ರಮದ ಅಧ್ಯಕ್ಷ ಐರೋಡಿ ರಾಜಶೇಖರ ಹೆಬ್ಬಾರರು ತಮ್ಮ ಭಾಷಣದಲ್ಲಿ ಶಿರೂರು ಫಣಿಯಪ್ಪಯ್ಯನವರೊಂದಿಗೆ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಫಣಿಗಿರಿ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಶ್ರೀ ಎಸ್ ಜನಾರ್ಧನ ಮರವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀ ಸತ್ಯನಾರಾಯಣ ಪುರಾಣಿಕ್ ಉಪ್ಪುಂದ ಸ್ವಾಗತಿಸಿದರು. ಶ್ರೀ ಕೃಷ್ಣಮೂರ್ತಿ ಬ್ರಹ್ಮಾವರ ತಾಳೆಗರಿ ಗ್ರಂಥಗಳ ಬಗ್ಗೆ ವಿವರಣೆ ನೀಡಿದರು ಉಮೇಶ ಶಿರೂರು ,ರಮೇಶ ಶಿರೂರು ಫಣಿಗಿರಿ ಪ್ರತಿಷ್ಠಾನದ ಕಾರ್ಯ ವಿವರ ವರದಿ ಓದಿದರು . ಕೌಶಿಕ ಶಿರೂರು ವಂದಿಸಿದರು. ಮಂಜುನಾಥ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.