ಕೋಲಾರ : ಪಂಚರತ್ನ ರಥಯಾತ್ರೆ ಹಾಗೂ ಪ್ರವಾಸ ಯಶಸ್ವಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ -ಎಚ್.ಡಿ.ಕುಮಾರಸ್ವಾಮಿ

ಶ್ರೀನಿವಾಸಪುರ: ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಹಾಗೂ ಪ್ರವಾಸ ಯಶಸ್ವಿಯಾಗಿದ್ದು, ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಕ್ಕಲಗಡ್ಡ ಗ್ರಾಮದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೆರೆಗಳಿಗೆ ಹರಿಸಲಾಗಿರುವ ಕೆಸಿ ವ್ಯಾಲಿ ಕೊಳಚೆ ನೀರು, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಮಾರಕವಾಗಿದೆ. ಜನರ ಆರೊಗ್ಯ ಜನರ ಆರೋಗ್ಯ ಕೆಡಿಸುತ್ತಿದೆ ಎಂದು ಹೇಳಿದರು.
ಕೆಸಿ ವ್ಯಾಲಿ ಕೊಳಚೆ ನೀರು ಶುದ್ಧೀಕರಣ ಯಂತ್ರಗಳು ಕೆಟ್ಟಿಹೋಗಿವೆ. ಶುದ್ಧೀಕರಿಸದ ನೀರನ್ನೇ ಕೆರೆಗಳಿಗೆ ಹರಿಸಲಾಗುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ದಶೇರಿ ಘಟಕ ಸ್ಥಾಪಿಸದೆ, ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಗಡಿ ಖ್ಯಾತೆ ತೆಗೆಯುತ್ತಿದೆ. ಆದರೆ ಡಬಲ್ ಇಂಜಿನ್ ಸರ್ಕಾರದಿಂದ ಗಡಿ ವಿವಾದ ಬಗೆಹರಿಯುವ ವಿಶ್ವಾಸವಿಲ್ಲ. ಎಲ್ಲಾ ವಿಷಯಗಳಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಜ್ಯಕ್ಕೆ ದ್ರೊಹ ಬಗೆಯುತ್ತಿವೆ. ನೆಲ ಜಲ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ ಎಂದು ಅಭಿಪ್ರಾಯಪಟ್ಟರು.
ಪಂಚರತ್ನ ಯೋಜನೆ ಪ್ರಾಮಾಣಿಕ ಅನುಷ್ಠಾನದಿಂದ ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ. ಮಕ್ಕಳಿಗೆ ಉಚಿತ ಹಾಗೂ ಗುಣಾತ್ಮ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 1.62 ಲಕ್ಷ ಮಕ್ಕಳ ಕೊರತೆ ಉಂಟಾಗಿರುವುದು ಕಳವಳಕಾರಿ ಅಂಶವಾಗಿದೆ ಎಂದು ಹೇಳಿದರು.
ಜಿಲ್ಲಾ ಜನತಾ ದಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ಕೆ.ನಾಗರಾಜ್, ಮುಖಂಡರಾದ ಬಿ.ವಿ.ಶಿವಾರೆಡಡಿ, ಸಿಎಂಆರ್ ಶ್ರೀನಾಥ್, ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಸಮೃದ್ಧ ಮಂಜುನಾಥ್, ಶಶಿಕುಮಾರ್, ಶೇಷಾದ್ರಿ, ಅಬ್ದುಲ್, ರಾಜಣ್ಣ, ಶ್ರೀನಿವಾಸ್, ಬಾಬು, ಪಾಷ, ಕುರ್ಕಿ ರಾಜೇಶ್ವರಿ, ಗಾಯಿತ್ರಿ ಮುತ್ತಪ್ಪ ಮತ್ತಿತರರು ಇದ್ದರು.