ಆಲೂಗಡ್ಡೆಗೆ ಅಂಗಮಾರಿ, ಬುಡ ರೋಗಕ್ಕೆ ಉಚಿತ ಔಷಧಿ ನೀಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರಕ್ಕೆ ರೈತಸಂಘ ಒತ್ತಾಯ

ಕೋಲಾರ: ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಹಾಗೂ ಬುಡ ರೋಗ ನಿಯಂತ್ರಣಕ್ಕೆ ಉಚಿತ ಔಷಧಿ ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗ ಬೆಳೆ ಸಮೇತ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಲಕ್ಷಾಂತರ ರೂಪಾಯಿ ಸಾಲದ ಜೊತೆಗೆ ಮನೆಯ ಹೆಂಡತಿ ಒಡವೆಯನ್ನು ಅಡ ಇಟ್ಟು ಬೆಳೆದಿರುವ 2 ಎಕರೆ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ರೋಗಕ್ಕೆ ಬಲಿಯಾಗಿದೆ. ಲಕ್ಷ ಲಕ್ಷ ಹಣ ನೀಡಿ ಖರೀದಿ ಮಾಡಿ ಔಷಧಿಯಿಂದ ಕನಿಷ್ಠಪಕ್ಷ ಶೇ.10ರಷ್ಟೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕುಸಿದಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳೊಂದಿಗೆ ಕೈಜೋಡಿಸಿ ರೈತರ ಮರಣ ಶಾಸನ ಬರೆಯುತ್ತಿದ್ದಾರೆಂದು ರೈತಸಂಘದ ಮಾಲೂರು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ ಕೃಷಿ ಕ್ಷೇತ್ರದ ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ವ್ಯವಸಾಯವೆಂಬ ಜೂಜಾಟದಲ್ಲಿ ದಿನೇದಿನೇ ರೈತ ಖಾಸಗಿ ಸಾಲಕ್ಕೆ ಸಿಲುಕುತ್ತಿದ್ದಾನೆ. 2 ವರ್ಷ ಕೊರೊನಾ ಕಾಟ 3 ವರ್ಷದಿಂದ ಬೆಳೆದ ಟೊಮೇಟೊ, ಕ್ಯಾಪ್ಸಿಕಂಗಳಿಗೆ ನುಸಿ, ರೋಸ್, ಜಾಂಡೀಸ್, ಊಜಿ ರೋಗ ನಿಯಂತ್ರಣಕ್ಕೆ ಬಾರದೆ ಮಾರುಕಟ್ಟೆಯಲ್ಲಿ ಉತ್ತಮ ಬೆಳೆಯಿದ್ದರೂ ತೋಟದಲ್ಲಿ ಬೆಳೆ ಇಲ್ಲದೆ ಹಾಕಿದ ಬಂಡವಾಳವು ಕೈಗೆ ಸಿಗದೆ ಕಟ್ಟಿದ ಬೆಳೆ ವಿಮೆ ಹಾಗೂ ಸರ್ಕಾರದ ಪರಿಹಾರ ಹಣಕ್ಕೆ ಜಾತಕ ಪಕ್ಷಿಗಳಂತೆ ರೈತರು ಕಾಯಬೇಕಾದ ಪರಿಸ್ಥಿತಿ ಇದ್ದರೂ ಸ್ಪಂದಿಸಬೇಕಾದ ಉಸ್ತುವಾರಿ ಸಚಿವರು ನಾಪತ್ತೆಯಾಗಿರುವ ಜೊತೆಗೆ ಅಧಿಕಾರಿಗಳು ಕಚೇರಿ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಉತ್ತಮ ಮುಂಗಾರು ಮಳೆಯಿಂದ ಹರ್ಷವಾಗಿರುವ ರೈತ 5 ವರ್ಷಗಳಿಂದ ನಷ್ಟವಾಗಿದ್ದರೂ ಛಲ ಬಿಡದೆ ಈ ವರ್ಷ ಆಲೂಗಡ್ಡೆ ಬಿತ್ತನೆ ಮಾಡಲು ಮುಂದಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ.
100 ರಿಂದ 120 ಮೂಟೆ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇವಲ 20 ಮೂಟೆ ಫಸಲು ಬಂದು ಹಾಕಿದ ಬಂಡವಾಳ ಕೈಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಇತ್ತೀಚೆಗೆ ಸುರಿಯುತ್ತಿರುವ ಜಡಿ ಮಳೆಗೆ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಒಂದು ಕಡೆಯಾದರೆ ಮತ್ತೊಂದು ಕಡೆ ಬೆಳೆಯನ್ನು ಬುಡದಲ್ಲಿ ಕಾಂಡ ತಿನ್ನುವ ಹುಳುಗಳ ಕಾಟದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕಣ್ಣ ಮುಂದೆಯೇ ಬೆಳೆ ನಾಶವಾಗುತ್ತಿರುವುದಕ್ಕೆ ದಿಕ್ಕು ತೋಚದೆ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲದ ಶೂಲಕ್ಕೆ ಸಿಲುಕಿ ಸಾಲ ತೀರಿಸಲಾಗದೆ ಸ್ವಾಭಿಮಾನಕ್ಕೆ ಅಂಜಿ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ಎಕರೆ ಆಲೂಗಡ್ಡೆ ಬೆಳೆಯಬೇಕಾದರೆ ಗೊಬ್ಬರ, ಔಷಧಿ, ಬಿತ್ತನೆಗಡ್ಡೆ ಕೂಲಿ ಸೇರಿ 2 ಲಕ್ಷ ಖರ್ಚು ಬರುತ್ತದೆ. ರೋಗದಿಂದ ಕನಿಷ್ಠ ಕೂಲಿ ಸಹ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಕಚೇರಿಯಲ್ಲೇ ಕುಳಿತು ಪತ್ರಿಕಾ ಹೇಳಿಕೆ ನೀಡಿ ಜಡಿ ಮಳೆಯಿಂದ ಬೆಳೆಯನ್ನು ಔಷಧಿ ಸಿಂಪಡಣೆ ಮಾಡಿ ಬೆಚ್ಚಗಿಡಿ ಎಂದು ಕೈತೊಳೆದುಕೊಳ್ಳುತ್ತಾರೆ. ಕನಿಷ್ಠ ಪಕ್ಷ ತೋಟಕ್ಕೂ ಸಹ ಭೇಟಿ ನೀಡುವುದಿಲ್ಲ.
ಇನ್ನು ವಿಮಾ ಕಂಪನಿಗಳಿಗೆ ಅನುಕೂಲವಾಗಲೆಂದು ಕಡ್ಡಾಯವಾಗಿ ರೈತರು ವಿಮೆ ಮಾಡಿಸಿ ವಿಮಾ ಕಂಪನಿಗಳನ್ನು ಉದ್ಧಾರ ಮಾಡಿ ಎಂದು ಹೇಳುತ್ತಾರೆ ಹೊರತು ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಾದ ವಿಮಾ ಕಂಪನಿಗಳು ನಾಪತ್ತೆಯಾಗಿದ್ದಾವೆ ಎಂದು ಆರೋಪಿಸಿದರು.
ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಕಾಂಡ ರೋಗಕ್ಕೆ ಉಚಿತ ಔಷಧಿಯನ್ನು ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ರೈತರಿಗೆ ಸ್ಪಂದಿಸುವಂತೆ ಆದೇಶ ಮಾಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿ.ಪ್ರ.ಕಾ. ಕೋಟೆ ಶ್ರೀನಿವಾಸ್, ಶ್ರೀನಿವಾಸಪುರ ತಾ.ಅ. ತೆರ್ನಹಳ್ಳಿ ಆಂಜಿನಪ್ಪ, ರಾ.ಪ್ರ.ಕಾ. ಫಾರೂಖ್ ಪಾಷ, ಹರೀಶ್, ಪುತ್ತೇರಿ ರಾಜು, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುಳಾ ಮುಂತಾದವರಿದ್ದರು.