ಶ್ರೀನಿವಾಸಪುರ: ಅನ್ಯ ಭಾಷೆಗಳ ಪ್ರಭಾವ ಇರುವ ಗಡಿ ಭಾಗದ ಜನರು ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತಿ ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡ ಒಂದು ಸುಂದರ ಹಾಗೂ ಶಕ್ತಿಯುತ ಭಾಷೆಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ನಮ್ಮ ಸುಂದರ ಹಾಗೂ ಅರ್ಥಗರ್ಭಿತ ನಾಡಗೀತೆ ನಾಡಿನ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ನಾಡಗೀತೆ ಗಾಯನದ ಮೂಲಕ ಕನ್ನಡ ಕಂಪು ಪಸರಿಸಬೇಕು. ಗೀತೆಯ ಆಶಯಕ್ಕೆ ತಕ್ಕಂತೆ ನಡೆಯಬೇಕು. ಆಗ ಸರ್ವ ಜನಾಂಗದ ಶಾಂತಿಯ ತೋಟ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ನಾಡಗೀತೆ ಹಾಡಿದರು. ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳು ಧ್ವನಿಗೂಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಂಜುನಾಥ್, ಪ್ರಾಂಶುಪಾಲ ಪ್ರಾಣೇಶ್, ಅಧಿಕಾರಿಗಳಾದ ಕೃಷ್ಣಪ್ಪ, ಜಯರಾಂ, ಬಾಬು, ಬಿ.ವಿ.ಮುನಿರೆಡ್ಡಿ, ಎಂ.ಶ್ರೀನಿವಾಸನ್, ಡಾ. ಮಂಜುನಾಥರೆಡ್ಡಿ ಮತ್ತಿತರರು ಇದ್ದರು.
ಕೋಟಿ ಕಂಠ ಗಾಯನ: ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಕೋಟಿ ಕಂಠ ಗಾಯನಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧ್ವನಿಗೂಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.