ಗುರುಭವನ ನಿರ್ಮಾಣಕ್ಕಾಗಿ 5 ಹಳೆ ಕಟ್ಟಡಗಳ ನೆಲಸಮ ಆರಂಭ
ಶಿಕ್ಷಕರ ಬಹುನಿರೀಕ್ಷಿತ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ-ಕೃಷ್ಣಮೂರ್ತಿ

ಕೋಲಾರ:- ಗುರುಭವನ ನಿರ್ಮಿಸಲು ಉದ್ದೇಶಿಸಿರುವ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಐದು ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವ ಹಿನ್ನಲೆಯಲ್ಲಿ ನೆಲಸಮಗೊಳಿಸಲು ಕ್ರಮ ಕೈಗೊಂಡಿದ್ದು, ಗುರುಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಸಿದ್ದಗೊಳಿಸಲಾಗುತ್ತಿದೆ ಎಂದು ಗುರುಭವನ ಸಮಿತಿ ಅಧ್ಯಕ್ಷರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ನಗರದ ಮಾಧ್ಯಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಹಳೆ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯವನ್ನು ವೀಕ್ಷಿಸಿದ ನಂತರ ಅವರು ಮಾತನಾಡುತ್ತಿದ್ದರು.
ಗುರುಭವನ ನಿರ್ಮಾಣ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಸಂಸದ ಎಸ್.,ಮುನಿಸ್ವಾಮಿ,ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಹಲವು ಶಾಸಕರು ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡಲು ಮುಂದೆ ಬಂದಿದ್ದಾರೆ ಎಂದರು.
ಗುರುಭವನಕ್ಕಾಗಿ ಈ ಜಾಗದಲ್ಲಿ ಉತ್ತರ ದಕ್ಷಿಣ 145 ಅಡಿ ಹಾಗೂ ಪೂರ್ವ,ಪಶ್ಚಿಮ-80 ಅಡಿಗಳ ನಿವೇಶನ ವಿಂಗಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅತಿ ಶೀಘ್ರ ಶಿಲಾನ್ಯಾಸ ನಡೆಸುವ ಕುರಿತು ಗುರುಭವನ ಸಮಿತಿ ಪ್ರಯತ್ನ ಮುಂದುವರೆಸಿದೆ ಎಂದರು.
ನೆಲಸಮಗೊಳಿಸುತ್ತಿರುವ ಕಟ್ಟಡದಲ್ಲಿನ ಬಾಗಿಲು, ಕಿಟಕಿಗಳನ್ನು ಅರಣ್ಯ ಇಲಾಖೆ ಬೆಲೆ ನಿಗಧಿ ಮಾಡಿದ ನಂತರ ಹರಾಜು ಹಾಕಲು ಕ್ರಮವಹಿಸುವುದಾಗಿ ತಿಳಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಂತೆ ಕೋಲಾರದಲ್ಲೂ ಅತಿ ಶೀಘ್ರ ಭವನ ನಿರ್ಮಾಣವಾಗಲಿ ಎಂದು ಆಶಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಈ ಸಂಬಂಧ ಮಾಹಿತಿ ನೀಡಿ, ಗುತ್ತಿಗೆದಾರರಾದ ಮಮತಾ ಕೋಂ ಮುನೇಶ್ ಅವರು ಕಟ್ಟಡದ ನೆಲಸಮ ಗುತ್ತಿಗೆ ಪಡೆದಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಈ ಕಾರ್ಯ ಮುಗಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಗುರುಭವನ ನಿರ್ಮಾಣ ಈ ಜಿಲ್ಲೆಯ ಎಲ್ಲಾ ಶಿಕ್ಷಕರ ಆಶಯವಾಗಿದ್ದು, ಈಗಾಗಲೇ ತಡವಾಗಿದೆ, ನಮ್ಮ ಅವಧಿಯಲ್ಲಿ ಗುರುಭವನ ನಿರ್ಮಿಸಲು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದು, ವಿಧಾನಪರಿಷತ್,ವಿಧಾನಸಭಾ ಸದಸ್ಯರು, ಸಂಸದರ ನಿಧಿ ಸೇರಿದಂತೆ ಹಣ ಕ್ರೋಢೀಕರಿಸಲು ಪ್ರಯತ್ನ ಮುಂದುವರೆಸಿರುವುದಾಗಿ ತಿಳಿಸಿದರು.
ಗುರುಭವನ ಸಮಿತಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಡಯಟ್ ಪ್ರಾಂಶುಪಾಲರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ,ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಸದಸ್ಯರಾಗಿ ಬಿಇಒ ಕನ್ನಯ್ಯ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್,ಶಿಕ್ಷಕರ ಸಂಘದ ಮಹಿಳಾ ಪ್ರತಿನಿಧಿ ಚಾಮುಂಡೇಶ್ವರಿ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಶಿಕ್ಷಕ ಸಂಘಟನೆಗಳ ಮುಖಂಡರಾದ ಅಪ್ಪೇಗೌಡ, ಎಂ.ನಾಗರಾಜ್, ಶಿವಕುಮಾರ್, ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಶ್ರೀರಾಮ್,ಮುಖ್ಯಶಿಕ್ಷಕರ ಸಂಘದ ಖಜಾಂಚಿ ರವಿ, ಟಿ.ಎಲ್.ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.