ಭಾರಿ ಅಂತರದಿಂದ  ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಗದ್ದುಗೆ ಹಿಡಿದ ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸಿಗೆ ಮರಳಿ ಜೀವ ಕೊಡುವ ಕೆಲಸ ಆಗಬೇಕಿದೆ

 ನಿರೀಕ್ಷೆಯಂತೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌‌ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಅಂತರದಿಂದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಗದ್ದುಗೆ ಹಿಡಿದಿದ್ದಾರೆ.ಈ ಮೂಲಕ ಸುಮಾರು 2 ದಶಕಗಳ ನಂತರ ಕಾಂಗ್ರೆಸ್‌ನ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಮೊದಲ ಗಾಂಧಿಯೇತರ ನಾಯಕರಾಗಿ ಹೊರಹೊಮ್ಮಿದ್ದಾರೆ. ಅದೂ ಕರ್ನಾಟಕದವರಾಗಿದ್ದು ವಿಶೇಷ.

    ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳನ್ನು ಪಡದಿದ್ದು, ಅವರ ಪ್ರತಿಸ್ಪರ್ಧಿ ಶಶಿ ತರೂರ್‌ 1072 ಮತಗಳನ್ನು ಪಡೆದಿದ್ದಾರೆ. 416 ಮತಗಳು ತಿರಸ್ಕೃತಗೊಂಡಿದ್ದು, ಒಟ್ಟು 9385 ಮತಗಳು ಚಲಾವಣೆಯಾಗಿದ್ದವು.

    ಸ್ಪರ್ಧಿಸಿ ಸೋತ ಶಶಿ ತರೂರ್‌ ಪಕ್ಷದ ಹೊಸ ಅಧ್ಯಕ್ಷ ಖರ್ಗೆಯವರನ್ನು ತರೂರ್‌ ಅಭಿನಂದಿಸಿದ್ದು, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿರುವುದು ದೊಡ್ಡ ಗೌರವ ಮತ್ತು ದೊಡ್ಡ ಜವಾಬ್ದಾರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಆ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ” ಎಂದು ಹೇಳಿದಲ್ಲದೆ “ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು ಮತ್ತು ಭಾರತದಾದ್ಯಂತ ಕಾಂಗ್ರೆಸ್‌ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡಿದ್ದು ಒಂದು ಸುಯೋಗವಾಗಿತ್ತು” ಎಂದು ಶಶಿ ತರೂರ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

     20 ವರ್ಷಗಳ ನಂತರ ನಡೆದ ಪಕ್ಷದ ಮೊದಲ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ದೀಪಾವಳಿ ನಂತರ ಪಕ್ಷದ ಅಧ್ಯಕ್ಷರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

  ರಾಷ್ಟ್ರೀಯ ಕಾಂಗ್ರೆಸ್  ಅಧ್ಯಕ್ಷರ ಗದ್ದುಗೆ ಹಿಡಿದ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಹಳ ಜವಾಬ್ದಾರಿ ಇದೆ. ಕಾಂಗ್ರೆಸ್ ಪಾಳಯದಲ್ಲಿ ಹೊಸ ನೀರಿಕ್ಷೆ, ಗುರಿ ತಲುಪಬೇಕಾಗಿದೆ.  ಮಲ್ಲಿಕಾರ್ಜುನ ಖರ್ಗೆ ಉತ್ತಮ ರಾಜಕೀಯ ನೇತಾರ ಅವರಿಗೆ ತುಂಬು ಅನುಭವ ಇದೆ. ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಧ್ವನಿಯಾಗಿತ್ತು, ಆದರೆ ಇದೀಗ ಇದಕಿಂತ ಉತ್ತಮ ಅವಕಾಶ ಸಿಕ್ಕಿದೆ. ಕಾಂಗ್ರೆಸಿಗೆ ಮರಳಿ ಜೀವ ಕೊಡುವ ಕೆಲಸ ಮಲ್ಲಿಕಾರ್ಜುನ ಖರ್ಗೆಯವರಿಂದ ಆಗಬೇಕಿದೆ.