“ಬಾಲವನದ ಜಾದೂಗಾರ” ಎಲ್ಲಾ ವಿದ್ಯಾರ್ಥಿಗಳು ನೋಡಬೇಕು -ಸಚಿವ ಕೋಟ ಶ್ರೀನಿವಾಸ ಪೂಜಾರಿ


“ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರದ ಕೆ. ಪಿ. ಶ್ರೀಶನ್ ನಿರ್ಮಾಣದ ಹೊಣೆ ಹೊತ್ತು ಖ್ಯಾತ ನಿರ್ದೇಶಕ ಇ. ಎಂ. ಅಶ್ರಫ್ ನಿರ್ದೇಶಿಸಿದ “ಬಾಲವನದ ಜಾದೂಗಾರ” ಒಂದು ಅತ್ಯುತ್ತಮ ಶೈಕ್ಷಣಿಕ ಕಿರು ಚಿತ್ರವಾಗಿದ್ದು ಎಲ್ಲ ಮಕ್ಕಳೂ ಹೆತ್ತವರೂ ಇದನ್ನು ನೋಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಚಿತ್ರ ನೋಡಲು ಅನುಕೂಲವಾಗುವಂತೆ ವ್ಯವಸ್ಥೆ ಆಗಬೇಕು. ನಾವೆಲ್ಲ ಅಭಿಮಾನದಿಂದ, ಹೆಮ್ಮೆಯಿಂದ ಕಾಣುವ ಕೋಟ ಶಿವರಾಮ ಕಾರಂತರ ಬದುಕು, ಸಾಹಿತ್ಯ, ಮಕ್ಕಳ ಮನೋವಿಕಾಸಕ್ಕಾಗಿ ಅವರು ಮಾಡಿದ ಕಾರ್ಯ ಸಾಧನೆಗಳ ಹಿನ್ನಲೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿರುವುದರಿಂದ ಇದು ಇತರ ಎಲ್ಲ ಭಾಷೆಗಳಲ್ಲೂ ಪ್ರದರ್ಶನವಾಗುವಂತಾಗಬೇಕು” ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ “ಬಾಲವನದ ಜಾದೂಗಾರ” ಕಿರು ಚಿತ್ರದ ತಂಡವನ್ನು ಗೌರವಿಸುತ್ತಾ ನುಡಿದರು.
ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ “ಬಾಲವನದ ಜಾದೂಗಾರ” ಚಿತ್ರ ಅ. 8 ರಂದು ಬಿಡುಗಡೆಗೊಂಡಿತ್ತು.
“ಕೋಟದ ಕಾರಂತ ಥೀಂ ಪಾರ್ಕ್‍ನಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದಾಗ ಇಷ್ಟು ಉತ್ತಮ ಚಿತ್ರವಾಗಿ ಬಿಡುಗಡೆಯಾಗುವ ಬಗ್ಗೆ ಕಲ್ಪನೆ ಇರಲಿಲ್ಲ. ಆದರೆ ಚಿತ್ರ ನೋಡಿದಾಗ ಅದ್ಬುತ ಅನಿಸಿತು. ಕಾರಂತರ ಬಹುತೇಕ ಚಿಂತನೆಯ ಹಿನ್ನಲೆಯಲ್ಲಿ ಪರಿಣಾಮಕಾರಿಯಾಗಿ 35 ನಿಮಿಷಗಳೊಳಗೆ ಕಥೆ ನಿರೂಪಿಸಿರುವುದು ಅಭಿನಂದನೀಯ” ಎಂದು ಅವರು ಹೇಳಿದರು.
ಚಿತ್ರದ ನಿರ್ದೇಶಕ ಇ. ಎಂ. ಅಶ್ರಫ್ ಹಾಗೂ ನಿರ್ಮಾಪಕ ಕೆ. ಪಿ. ಶ್ರೀಶನ್ ಅವರನ್ನು ಸಚಿವರು ಗೌರವಿಸಿದರು.
ಚಿತ್ರದ ಕಲಾವಿದರು, ತಂತ್ರಜ್ಞರನ್ನು ಅವರು ಅಭಿನಂದಿಸಿ ಗೌರವಿಸಿದರು. ಬಾಲ ನಟ ಆರೊನ್ ಪಾಯಸ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೋಟ ಡಾ. ಕಾರಂತ ಪ್ರತಿಷ್ಠಾನ ಅಧ್ಯಕ್ಷ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕಮಾರ್, ಶ್ರೀ ವೆಂಕಟರಮಣ ಶೈಕ್ಷಣಿಕ ಸಂಸ್ಥೆಯ ಸಂಚಾಲಕರಾದ ಕೆ. ರಾಧಾಕೃಷ್ಣ ಶೆಣೈ ಅಭಿನಂದನೆ ಸಲ್ಲಿಸಿದರು. ಕೇರಳ ಸಮಾಜ ಉಡುಪಿ ಅಧ್ಯಕ್ಷ, ಸುಗುಣ ಕುಮಾರ್, ಕಾರ್ಯದರ್ಶಿ ಬಿನೀಶ್ ಉಪಸ್ಥಿತರಿದ್ದರು.
ನಿರ್ಮಾಪಕ ಕೆ. ಪಿ. ಶ್ರೀಶನ್ ಸ್ವಾಗತಿಸಿದರು. ನಿರ್ದೇಶಕ ಇ. ಎಂ. ಅಶ್ರಫ್ ಚಿತ್ರೀಕರಣ ಯಶಸ್ವಿಯಾಗಿ ನಡೆಯಲು ಸಹಕರಿಸಿದರಿಗೆ ಕೃತಜ್ಞತೆ ಸಲ್ಲಿಸಿದರು.
ಚಿತ್ರಕಥೆ ಬರೆದ ಪಾರ್ವತಿ ಜಿ. ಐತಾಳ ಚಿತ್ರದ ಕಲಾವಿದರಾದ ಎ. ಎಸ್. ಎನ್. ಹೆಬ್ಬಾರ್, ಡಾ. ಕೆ. ಎಸ್. ಕಾರಂತ್, ಸಮಾಜದ ಗಣ್ಯರಾದ ಪ್ರಶಾಂತ್ ತೋಳಾರ್, ಮನೋಜ್ ನಾಯರ್, ಮುತ್ತಯ್ಯ ಶೆಟ್ಟಿ, ಪ್ಲೆಸೆಂಟ್ ಇಬ್ರಾಹಿಂ ಸಾಹೇಬ್, ವಿಠಲ ಕಾಮತ್ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಟಿಸಿದ ಸಿ. ಪ್ರದೀಪ್, ಶ್ರೀಮತಿ ನಾಗರತ್ನ, ಸಂದೇಶ್ ಶೆಟ್ಟಿ, ಸಂಕಲನ ಮಾಡಿದ ಹರಿ ಜಿ. ನಾಯರ್, ಸಹ ನಿರ್ದೇಶಕ ಶೈಜು ದೇವದಾಸ್, ಸಹಾಯಕ ನಿರ್ದೇಶಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಹಾಗೂ ಬಾಲ ಕಲಾವಿದರಾದ ನೀತು, ಪ್ರಾರ್ಥನಾ ಮುಂತಾದವರು ಉಪಸ್ಥಿತರಿದ್ದರು.
“ಕುಂದಪ್ರಭ” ಸಂಪಾದಕ ಯು. ಎಸ್. ಶೆಣೈ ನಿರೂಪಿಸಿದರು. ಪ್ರೊಡಕ್ಷನ್ ಕಂಟ್ರೋಲರ್ ಜೊಯ್ ಜಿ. ಕಾರ್ವೆಲ್ಲೊ, ಭುಜಂಗ ವಂದಿಸಿದರು.