ಸಮುದಾಯ ಪ್ರತಿಭಾ ಸಂಪನ್ನರನ್ನು ಗುರುತಿಸಿ, ಅವರಲ್ಲಿನ ಪ್ರತಿಭೆ ಅರಳಲು ನೆರವಾಗಬೇಕು-ಆರ್.ಚೌಡರೆಡ್ಡಿ

ಶ್ರೀನಿವಾಸಪುರ: ಸಮುದಾಯ ಪ್ರತಿಭಾ ಸಂಪನ್ನರನ್ನು ಗುರುತಿಸಿ, ಅವರಲ್ಲಿನ ಪ್ರತಿಭೆ ಅರಳಲು ನೆರವಾಗಬೇಕು. ಅರಳು ಪ್ರತಿಭೆಗಳು ಕಂಡ ಕನಸನ್ನು ನನಸಾಗಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಉನಿಕಿಲಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಂಗೀತ ಕಲಾವಿದೆ ಲೇಖಾ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್.ಲೇಖಾ ಅಭಿಜಾತ ಕಲಾವಿದೆ. ಚಿಕ್ಕ ವಯಸ್ಸಿನಿಂದಲೇ ಸಂಗೀತ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪೋಷಕರ ಪ್ರೋತ್ಸಾಹ, ಗುರುಗಳ ಆಶೀರ್ವಾದ ಹಾಗೂ ಸತತ ಪರಿಶ್ರಮದ ಪರಿಣಾಮವಾಗಿ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ ಎಂದು ಹೇಳಿದರು.
ಲೇಖಾ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತಮ್ಮ ಮಧುರವಾದ ಧ್ವನಿ ಹಾಗೂ ಸುಶ್ರ್ಯಾವ್ಯ ಗಾಯನದ ಮೂಲಕ ಸಂಗೀತ ಪ್ರಿಯರ ಪ್ರೀತಿಗೆ ಪಾತ್ರರಾಗಿದ್ದಾರೆ. ದಾನಿ ಧರ್ಮೇಶ್ ಅವರು ಲೇಖಾ ಅವರ ಪ್ರತಿಭೆಯನ್ನು ಗುರುತಿಸಿ ವಿಶೇಷವಾಗಿ ಸನ್ಮಾನಿಸುತ್ತಿದ್ದಾರೆ. ಇಂಥ ದಾನಿಗಳ ಸಂಖ್ಯೆ ಹೆಚ್ಚಬೇಕು. ಪ್ರತಿಭೆಗೆ ಪುರಸ್ಕಾರ ಸಿಗಬೇಕು. ಆದರೆ ಪ್ರೋತ್ಸಾಹದ ಕೊರತೆಯಿಂದಾಗಿ ಅದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಅಮರನಾಥ್ ಮಾತನಾಡಿ, ವಿಶ್ವ ಭಾಷೆಯಾದ ಸಂಗೀತ ಹಾಗೂ ಕಲಾವಿದರಿಗೆ ದೇಶ ಭಾಷೆಗಳ ಎಲ್ಲೆಯಿಲ್ಲ. ಕಲೆ ಮತ್ತು ಕಲಾವಿದರನ್ನು ಗೌರವಿಸುವ ಸಾಂಸ್ಕøತಿಕ ಪರಂಪರೆ ಮುಂದುವರಿಯಬೇಕು. ಲೇಖಾ, ಸಂಗೀತ ಹಾಗೂ ಭರತ ನಾಟ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಹುಮಾನ ಹಾಗೂ ಪಾರಿತೋಷಕ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ದಾನಿ ಧರ್ಮೇಶ್ ಲೇಖಾ ಅವರನ್ನು ಸನ್ಮಾನಿಸಿ ಮಾತನಾಡಿ, ಸಾಧನೆಯ ಹಾದಿಯಲ್ಲಿ ಸಾಗುವ ವ್ಯಕ್ತಿಗಳಿಗೆ ಸನ್ಮಾನ, ಗೌರವ ತಾನಾಗಿಯೇ ಸಿಗುತ್ತದೆ. ಲೇಖಾ ಬಾಲ್ಯದಿಂದಲೇ ಸಾಧಕರ ಹಾದಿಯಲ್ಲಿ ಸಾಗಿದ ಪರಿಣಾಮವಾಗಿ, ಉತ್ತಮ ಕಲಾವಿದೆಯಾಗಿ ರೂಪಗೊಳ್ಳಲು ಸಾಧ್ಯವಾಯಿತು. ಅವರು ಸಂಗೀತಾ ಹಾಗೂ ನೃತ್ಯ ಕ್ಷೇತ್ರದಲ್ಲಿ ಮುನ್ನಡೆಯಲು ಅಗತ್ಯವಾದ ಎಲ್ಲ ಪ್ರೋತ್ಸಾಹ ನೆರವು ನೀಡಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯ ನಾಗರಾಜ್, ಇಸಿಒ ಆಂಜಿನಪ್ಪ, ಶಿಕ್ಷಕರಾದ ಚಂದ್ರಶೇಖರ್, ನಾಗರಾಜ್, ಲೇಕಾ ಅವರು ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗೀತ ಕಲಾವಿದೆ ಲೇಖಾ, ತಂದೆ ನಾಗರಾಜ್ ಹಾಗೂ ತಾಯಿ ಪುಷ್ಪ ಅವರನ್ನು ಸನ್ಮಾನಿಸಲಾಯಿತು. ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಅಂತರ ರಾಷ್ಟ್ರೀಯ ಕ್ರೀಡಾಪಟು ವಿ.ನಿಶಾಂತ್ ಕುಮಾರ್ ಸಾಹಿತಿ ಆರ್.ಚೌಡರೆಡ್ಡಿ ಅವರು ಬರೆದ ಹಾಗೂ ಯುವ ಗಾಯಕ ತುಷಾರ್ ನಾಗ್ ಹಾಡಿದ ‘ಕೊಟ್ಟರೆ ಕೊಡಬೇಕು’ ಎಂಬ ಗೀತೆಯ ಆಡಿಯೋ ಬಿಡುಗಡೆ ಮಾಡಿದರು. ದಾನಿ ದರ್ಮೇಶ್ ಅವರಿಂದ ಶಾಲಾ ಮಕ್ಕಳಿಗೆ ಇಷ್ಟದ ಬಟ್ಟೆ ವಿತರಿಸಲಾಯಿತು. ದಾನಿ ಮದುಸೂಧನ್ ಮಕ್ಕಳಿಗೆ ನೋಟ್ ಪುಸ್ತಕ ನೀಡಿದರು.
ಸಿಆರ್‍ಪಿಗಳಾದ ಗಂಗಾಧರ್, ಮಮತ, ಮುಖ್ಯ ಶಿಕ್ಷಕ ನರಸಿಂಹರೆಡ್ಡಿ ಶಿಕ್ಷಕಿ ಲಕ್ಷ್ಮಿದೇವಮ್ಮ, ಶಿಕ್ಷಕರಾದ ವಿಶ್ವನಾಥ್, ಚಂದ್ರಶೇಖರ್, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಶಾಂತ್ ಇದ್ದರು.