ಸೆ.10 ರ ಭಾರತ್ ಜೋಡೋ ಪಾದಯತ್ರೆ-ಕೋಲಾರ ವಿಧಾನಸಭಾ ಕ್ಷೇತ್ರದಿಂದ-ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಪಾಲ್ಗೊಳ್ಳೋಣ-ವಿ.ಆರ್.ಸುದರ್ಶನ್ ಮನವಿ

ಕೋಲಾರ:- ಎಐಸಿಸಿ ಮಾರ್ಗದರ್ಶನ ಹಾಗೂ ಕೆಪಿಸಿಸಿ ಆಶ್ರಯದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಸೆ.10 ರಂದು ಬೆಳಗ್ಗೆ ಮುಂದುವರೆಯಲಿರುವ ರಾಹುಲ್‍ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕೋಲಾರ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರು,ಮಾಜಿ ಶಾಸಕರು, ಎಲ್ಲಾ ಘಟಕಗಳ ಪದಾಧಿಕಾರಿಗಳು, ಪಕ್ಷದ ಹಿತೈಷಿಗಳು,ವಿವಿಧ ನಾಗರೀಕ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಕಾಂಗ್ರೆಸ್ ಶಾಸಕಾಂಗಪಕ್ಷದ ನಾಯಕ ಸಿದ್ದರಾಮಯ್ಯ,ವಿಧಾನಪರಿಷತ್ ವಿರೋಧಪಕ್ಷದ ನಾಯಕ ಡಿ.ಕೆ.ಹರಿಪ್ರಸಾದ್,ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಸೇರಿದಂತೆ ಇನ್ನಿತರ ಹಿರಿಯ ನಾಯಕರು ಭಾಗವಹಿಸುವರು.
ಈ ಹಿನ್ನಲೆಯಲ್ಲಿ ಸೆ.10 ರಂದು ಬೆಳಗ್ಗೆ 6-30ಕ್ಕೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಆರಂಭಗೊಳ್ಳುವ ಈ ಭಾರತ್ ಜೋಡೋ ಪಾದಯಾತ್ರೆ ಮಧ್ಯಾಹ್ನ ಹಿರಿಯೂರು ಸಮೀಪದ ತಾಹಾ ಪ್ಯಾಲೇಸ್ ಸಮೀಪ ಸಾಗಲಿದ್ದು, ಕೋಲಾರ ಜಿಲ್ಲೆಯ ಕೋಲಾರ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ಪಕ್ಷದ ಶಾಸಕರು,ಮುಖಂಡರು,ಮಾಜಿ ಶಾಸಕರು,ಪಕ್ಷದ ಎಲ್ಲಾ ವಿವಿಧ ಹಂತದ, ಎಲ್ಲಾ ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಲು ಮನವಿ ಮಾಡಿದ್ದಾರೆ.
ಪಾದಯಾತ್ರೆಗೆ
ಉತ್ತಮ ಸ್ಪಂದನೆ
ದೇಶದ ಐಕ್ಯತೆ,ಸಮಗ್ರತೆ, ಸಂವಿಧಾನವನ್ನು ಗಟ್ಟಿಗೊಳಿಸಿ ಜನರಲ್ಲಿ ಜಾಗೃತಗೊಳಿಸುವ ಪ್ರಯತ್ನದಿಂದ ನಡೆದಿರುವ ಭಾರತ್ ಜೋಡೋ ಪಾದಯಾತ್ರೆಗೆ ಸಿಕ್ಕಿರುವ ಜನಸ್ಪಂದನೆಯಿಂದ ಕರ್ನಾಟಕ,ಕೇರಳ,ತಮಿಳುನಾಡು ರಾಜ್ಯಗಳಲ್ಲಿ ಭರವಸೆ ಮೂಡಿಸಿರುವುದರ ಜತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೂ ನೆರವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿದಿನದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು,ಸಂಸದರು,ಮಾಜಿಶಾಸಕರು,ಮಾಜಿ ಸಂಸದರು, ವಿವಿಧ ಹಂತದ ಪದಾಧಿಕಾರಿಗಳು, ನಾಗರೀಕ ಸಂಘಸಂಸ್ಥೆಗಳು,ಪಕ್ಷದ ಹಿತೈಷಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿದ್ದು, ವಿವಿಧ ವರ್ಗಗಳ, ವೃತ್ತಿಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಸಂವಾದವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗಳು, ಅ.10ರ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸೋಣ ಎಂದು ತಿಳಿಸಿದ್ದಾರೆ.
ವಿವಿಧ ದಿನಾಂಕಗಳಂದು ಆಯಾ ವ್ಯಾಪ್ತಿಯ ವಿಧಾನಸಭಾ,ವಿಧಾನಪರಿಷತ್ ಹಾಲಿ,ಮಾಜಿ ಸದಸ್ಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ,ರಾಷ್ಟ್ರದ ಆಗುಹೋಗುಗಳ ಕುರಿತಾಗಿಯೂ ಸಂವಾದ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದಿರುವ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.