ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ಭಾರತ ವಿಶ್ವಗುರುವಾಗಿಸುವ ಮೋದಿ ಕನಸು ನನಸಾಗಿಸೋಣ-ಅಶ್ವಥ್ಥನಾರಾಯಣ

ಕೋಲಾರ:- ದೇಶವನ್ನು ಆತ್ಮನಿರ್ಭರ, ಸ್ವಾವಲಂಬಿ ಭಾರತ ಹಾಗೂ ವಿಶ್ವಗುರುವಾಗಿಸುವ ಪ್ರಧಾನಿ ನರೇಂದ್ರ ಮೋದಿ ಕನಸನ್ನು ನನಸಾಗಿಸಲು ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎ.ಎನ್.ಅಶ್ವಥ್ಥನಾರಾಯಣ ಕರೆ ನೀಡಿದರು.
ಭಾನುವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಮೋದಿ @2022ರಡಿ ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ದಾಖಲೆಯೆನ್ನುವಂತೆ ಇದೇ ಮೊದಲಬಾರಿಗೆ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಅಂಗಾಂಗದಾನಿಗಳ ನೋಂದಣಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭಾರತವು ಸ್ವಾವಲಂಬಿ ದೇಶವಾಗಲು ದೇಸಿಯ ಉತ್ಪನ್ನಗಳಿಗೆ ಹೆಚ್ಚು ಅದ್ಯತೆ ನೀಡಬೇಕು, ಆಮದಿಗೆ ಕಡಿವಾಣ ಹಾಕಿ ಪ್ರತಿಯೊಂದು ಉತ್ಪನ್ನವೂ ಭಾರತದಲ್ಲೇ ತಯಾರಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ್ ಯೋಜನೆಯ ಉದ್ದೇಶವಾಗಿದೆ ಎಂದರು.
ಮಹಾತ್ಮಗಾಂಧಿ ಕನಸಿನಂತೆ ಖಾದಿ ಉತ್ಪನ್ನಗಳನ್ನು ಬಳಿಸುವ ಮೂಲಕ ಸ್ವದೇಶಿ ವಸ್ತುಗಳಿಗೆ ಪ್ರಥಮ ಅದ್ಯತೆ ನೀಡೋಣ, ಅವರ ಅದರ್ಶದಂತೆ ಶಾಂತಿ, ಸೌಹಾರ್ದತೆಗೆ ಹಾಗೂ ಸಾಮರಸ್ಯತೆಗೆ ಹೆಚ್ಚು ಒತ್ತು ನೀಡಿ ಜೀವನದಲ್ಲೂ ಅಳವಡಿಸಿಕೊಳ್ಳೋಣ ಎಂದರು.
ಸಂಸದರ ಪ್ರಯತ್ನ
ಶ್ಲಾಘನೀಯ ಕಾರ್ಯ
ಮಹಾತ್ಮ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಇಷ್ಟೊಂದು ದಾಖಲೆ ಪ್ರಮಾಣದ ರಕ್ತದಾನ, ಅಂಗಾಂಗಗಳ ದಾನ ನೋಂದಣಿ ಶಿಬಿರ ನಡೆಸುತ್ತಿರುವ ಸಂಸದ ಎಸ್.ಮುನಿಸ್ವಾಮಿ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಸಾವಿರಾರು ಮಂದಿ ರಕ್ತದಾನಕ್ಕೆ ಮುಂದಾಗಿರುವುದು ದಾಖಲೆಯಾಗಿದೆ, ಇದು ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತಿದೆ ಎಂದರು.
ಮೋದಿ ಗಮನಸೆಳೆದ
ರಕ್ತದಾನ ಶಿಬಿರ-ತೇಜಸ್ವಿ
ಸಂಸದ ತೇಜೇಸ್ವಿ ಸೂರ್ಯ ಮಾತನಾಡಿ, ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿಯವರ ನೇತ್ರತ್ವದಲ್ಲಿ ನಡೆಸುತ್ತಿರುವ ಬೃಹತ್ ರಕ್ತದಾನ ಶಿಬಿರ ಪ್ರಧಾನ ಮಂತ್ರಿ ಮೋದಿಜೀಯವರ ಗಮನ ಸೆಳೆಯುವಂತೆ ಆಯೋಜಿಸಲಾಗಿದೆ, ಮುನಿಸ್ವಾಮಿಯವರು ಪ್ರತಿಯೊಂದು ಕಾರ್ಯಕ್ರಮವನ್ನು ಇಡೀ ದೇಶವೇ ಕೋಲಾರದತ್ತ ತಿರುಗಿ ನೋಡುವಂತೆ ನಡೆಸುತ್ತಿದ್ದಾರೆ, 25 ಸಾವಿರ ಮಂದಿ ಯೋಗಪ್ರದರ್ಶನ ನೀಡಿದ್ದು, ಬೃಹತ್ ರಾಷ್ಟ್ರಧ್ವಜಾರೋಹಣ ಲಿಮ್ಕಾ ದಾಖಲೆ ಮಾತ್ರವಲ್ಲ ಮೋದೀಜಿಯವರ ಮೆಚ್ಚುಗೆಗೂ ಪಾತ್ರವಾಯಿತು ಎಂದರು.
ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಹಲವಾರು ಸಮುದಾಯಗಳ,ಸಂಘಟನೆಗಳಿಂದ 1.46 ಲಕ್ಷ ಯೂನಿಟ್ ರಕ್ತದಾನ ಮಾಡಲಾಗಿದೆ ಎಂದ ಅವರು, ರಕ್ತದ ದಾಸ್ತನು ಮಾಡುವುದು ಸಮಸ್ಯೆಯಾಗಿತ್ತು ರಾಷ್ಟ್ರದಲ್ಲಿಯೇ ಅಲ್ಲ ವಿಶ್ವದಲ್ಲಿಯೇ ಏಕ ಕಾಲದಲ್ಲಿ ರಕ್ತದಾನ ಮಾಡಿರುವುದು ದಾಖಲೆಯಾಗಿತ್ತು ಎಂದು ಸ್ಮರಿಸಿದರು.
ದಾಸ್ತಾನು ಸಮಸ್ಯೆ
2500 ಯುನಿಟ್
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ರಕ್ತದಾನ ಶಿಬಿರಗಳು ಆಯೋಜಿಸಲಾಗಿತ್ತು. ವಿಶ್ವದಾಖಲೆಯೊಂದಿಗೆ 15 ಸಾವಿರ ಯೂನಿಟ್ ರಕ್ತ ಸಂಗ್ರಹಣೆ ನಮ್ಮ ಗುರಿಯಾಗಿತ್ತು, ಅದಕ್ಕಾಗಿ ನೋಂದಣಿಯೂ ನಡೆದಿತ್ತು, ಆದರೆ ಜಿಲ್ಲೆಯಲ್ಲಿರುವ ರಕ್ತನಿಧಿಗಳಲ್ಲಿ ದಾಸ್ತನು ಮಾಡುವುದು ಸಮಸ್ಯೆಯಾಗಿರುವುದರಿಂದ ಎರಡೂವರೆ ಸಾವಿರ ಯೂನಿಟ್ ಮಾತ್ರ ರಕ್ತ ಸಂಗ್ರಹಿಸಲಾಗಿದೆ ಎಂದರು.
ರಕ್ತದಾನದ ಜತೆಗೆ ನೇತ್ರದಾನ ಮತ್ತು ಅಂಗಾಂಗಗಳ ದಾನದ ನೊಂದಣಿ ಕಾರ್ಯ ನಡೆಯುತ್ತಿದೆ. ಚರಿತ್ರೆಯಲ್ಲಿ ಇದೊಂದು ದಾಖಲಾರ್ಹ ದಿನವಾಗಿದ್ದು, ಕೋಲಾರ ಜಿಲ್ಲೆ ವಿಶ್ವದಲ್ಲೇ ಅತಿ ಹೆಚ್ಚು ಅಂಗಾಂಗದಾನಿಗಳ ನೋಂದಣಿ ನಡೆಸಿದ ಮಾದರಿ ಜಿಲ್ಲೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ನಮ್ಮ ನಿರೀಕ್ಷೆಗೂ ಮೀರಿ ದಾನಿಗಳು ಸಾಗರೋಪಾದಿಯಲ್ಲಿ ಸಾಗಿ ಬರುತ್ತಿರುವುದು ಹೆಮ್ಮೆಎನಿಸುತ್ತಿದೆ ಎಂದರು.
ಜ.12ರ ರಕ್ತದಾನ
ವಿಶ್ವದಾಖಲೆಗೆ ಸಿದ್ದತೆ
ಕೋಲಾರ ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ 2023 ಜನವರಿ 12 ರಂದು ವಿಶ್ವದಾಖಲೆಯ ರಕ್ತದಾನ ಶಿಬಿರ ನಡೆಸಲು ಗುರಿ ಹೊಂದಲಾಗಿದೆ, ಕೋಲಾರ ಜಿಲ್ಲೆ ಸಾವಿರಾರು ಜೀವಗಳನ್ನು ಉಳಿಸುವ ಜೀವದ್ರವ್ಯವನ್ನು ಅತಿ ಹೆಚ್ಚು ದಾನ ನೀಡಿದ ಹೆಗ್ಗಳಿಕೆಗೆ ಅಂದು ಪಾತ್ರವಾಗಲಿದೆ ಎಂದ ಅವರು, ಈ ಶಿಬಿರಕ್ಕೆ ಜಾತ್ಯಾತೀತ,ಪಕ್ಷಾತೀತವಾಗಿ ಸಹಕಾರ ನೀಡಲು ಯುವಕರಿಗೆ,ನಾಗರೀಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್, ಜಿಪಂ ಸಿಇಒ ಯುಕೇಶ್ ಕುಮಾರ್,ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ವೈ ಸಂಪಗಿ, ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್‍ಗೌಡ,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಡಿಹೆಚ್‍ಒ ಡಾ.ಜಗದೀಶ್,ಡಿಎಸ್ ವಿಜಯಕುಮಾರ್,ರಕ್ತನಿಧಿ ಅಧಿಕಾರಿ ಎಂಡಿ ಡಾ.ರೇವತಿ ಮತ್ತಿತರರು ಉಪಸ್ಥಿತರಿದ್ದರು.
ರಕ್ತದಾನ, ಅಂಗಾಂಗದಾನ ನೋಂದಣಿ ಕಾರ್ಯದಲ್ಲಿ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ,ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ,ಮಾವುಮಂಡಳಿ ಅಧ್ಯಕ್ಷ ವಾಸುದೇವ್, ಮಾಲೂರು ನಗರಾಭಿವೃದ್ದಿ ಅಧ್ಯಕ್ಷ ಸತೀಶ್ ಆರಾಧ್ಯ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಎಸ್.ಸಿ. ಘಟಕದ ಹನುಮಂತು, ಜಿಲ್ಲಾ ಮಾಧ್ಯಮ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ, ನಗರಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಒಬಿಸಿ ಮುಖಂಡ ರಾಜೇಶ್ ಸಿಂಗ್,ಜಿ.ಪಂ.ಮಾಜಿ ಸದಸ್ಯ ಮಹೇಶ್, ಬಂಗಾರಪೇಟೆ ಚಂದ್ರಾರೆಡ್ಡಿ, ಮಮತಮ್ಮ, ಸಾಮಾ.ಬಾಬು, ಸೂರ್ಯನಾರಾಯಣಸ್ವಾಮಿ ಮುಂತಾದವರು ನೆರವಾದರು.
ಬೆಳಿಗ್ಗೆ 8 ಗಂಟೆಗೆ ರಕ್ತಾದಾನ ಶಿಬಿರವು ಪ್ರಾರಂಭವಾಗಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜು 10 ಕೊಠಡಿಗಳು ಹಾಗೂ ಒಳ ಕ್ರೀಡಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಬಂಗಾರಪೇಟೆ, ಕೆ.ಜಿ.ಎಫ್,ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಕೋಲಾರ ಸೇರಿದಂತೆ ಸರ್ಕಾರಿ ನೌಕರರು, ವಿವಿಧ ಸಂಘಟನೆಗಳು ಸೇರಿದಂತೆ ಸಾವಿರಾರು ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಹಾಗೂ ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಸಿದರು.