ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಕಳೆದ ವರ್ಷದಂತೆ ಸುಲಭವಾಗಿರದು ಪರಿಶ್ರಮದಿಂದ ಓದಿದರೆ ಮಾತ್ರವೇ ಯಶಸ್ಸು – ನಾಗೇಂದ್ರಪ್ರಸಾದ್

ಕೋಲಾರ : – ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಹಿಂದಿನ ವರ್ಷದಷ್ಟು ಸುಲಭವಾಗಿರುವುದಿಲ್ಲ , ನೀವು ಈಗಿನಿಂದಲೇ ಪರಿಶ್ರಮ ಹಾಕಿ ಓದಿದರೆ ಮಾತ್ರವೇ ಈ ಬಾರಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿತು ಕಲಿಕೆ ಮುಂದುವರೆಸಿ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಕ್ಕಳಿಗೆ ಕಿವಿಮಾತು ಹೇಳಿದರು . ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ದಿಢೀರ್‌ ಭೇಟಿ ನೀಡಿದ್ದ ಅವರು ಶಾಲೆಯಲ್ಲಿ ನಡೆಯುತ್ತಿದ್ದ ಎಸ್ಸೆಸ್ಸೆಲ್ಸಿ ಅರ್ಧವಾರ್ಷಿಕ ಪರೀಕ್ಷೆ ವೀಕ್ಷಿಸಿದ ನಂತರ ಮಕ್ಕಳೊಂದಿಗೆ ಮಾತನಾಡಿದರು . ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ , ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ , ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರ ಎಂದರು .
ಉತ್ತಮ ಬರವಣಿಗೆ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ , ವಿದ್ಯಾರ್ಥಿಗಳು ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ , ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ .೧೦೦ ಅಂಕ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು . ಎಸೆಸೆಲಿ ಪ್ರಶ್ನೆ ಪತ್ರಿಕೆಯಲ್ಲಿ ಈ ಬಾರಿ ಕಠಿಣ ಪ್ರಶ್ನೆಗಳ ಪ್ರಮಾಣ ಹೆಚ್ಚಾಗಲಿದೆ . ಕಳೆದಬಾರಿಯಷ್ಟು ಸುಲಭವಂತಗೂ ಅಲ್ಲ , ಶ್ರದ್ಧೆ ವಹಿಸಿ ಓದಿ , ನಿಮ್ಮ ದೈನಂದಿನ ಕಲಿಕೆಗಾಗಿ ನೀವೇ ವೇಳಾಪಟ್ಟ ಸಿದ್ಧಪಡಿಸಿಕೊಳ್ಳಿ , ಅದರಂತೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು . ಫಲಿತಾಂಶ ಉತ್ತಮಪಡಿಸುವುದರ ಜತೆಗೆ ಇದೀಗ ಕೋವಿಡ್‌ನಿಂದಾದ ಕಲಿಕಾ ಹಿನ್ನಡೆಯನ್ನು ಸರಿಪಡಿಸುವ ಹೊಣೆಯೂ ಶಿಕ್ಷಕರ ಮೇಲಿದೆ , ಅದಕ್ಕಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು . ಶಿಕ್ಷಕರು ಕಲಿಕೆಯಲ್ಲಿ ಪ್ರಾಯೋಗಿಕ ಕಲಿಕೋಪಕರಣ ಬಳಸಲು ಸೂಚಿಸಿದ ಅವರು , ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಿ ಎಂದು ಸೂಚಿಸಿದರು . ಅರಾಭಿಕೊತ್ತನೂರು ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್‌ , ಗ್ರಂಥಾಲಯ , ವಿಜ್ಞಾನ ಪ್ರಯೋಗಾಲಯ ಮತ್ತಿತರ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಸಿದ್ದೇಶ್ವರಿ , ಶಿಕ್ಷಕರಾದ ಎಂ.ಆರ್‌.ಗೋಪಾಲಕೃಷ್ಣ , ಭವಾನಿ , ಶ್ವೇತಾ , ಸುಗುಣಾ , ಲೀಲಾ , ವೆಂಕಟರೆಡ್ಡಿ , ಫರೀದಾ , ಶ್ರೀನಿವಾಸಲು , ಚಂದ್ರಶೇಖರ್ ಮತ್ತಿತರರಿದ್ದರು .