ಕುಂದಾಪುರ:ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ವೃತ್ತ ಮಟ್ಟದ ಕ್ರೀಡಾಕೂಟ


ಕುಂದಾಪುರ: ಕ್ರೀಡೆ ಶಿಸ್ತಿನ ಜೊತೆಗೆ ಧೈರ್ಯ, ಸಾಹಸವನ್ನು ಕಲಿಸುತ್ತದೆ.ಕ್ರೀಡೆಯಲ್ಲಿ ವೇಗ,ಎತ್ತರ, ಶಕ್ತಿಯನ್ನು ಒಲಿಷ್ಠಗೊಳಿಸುವ ಹಾಗೇ ಅಭ್ಯಾಸ ಮಾಡಿ ಪದಕ ಪಡೆಯುವುದು ಎಲ್ಲರ ಗುರಿಯಾಗಬೇಕು ಎಂದು ಕುಂದಾಪುರ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಂಚಾಲಕ,ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವ್ರೊ ಹೇಳಿದರು.
ಅವರು ಬುಧವಾರ ನಗರದ ಗಾಂಧಿ ಮೈದಾನದಲ್ಲಿ ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರದ ಸಹಯೋಗದಲ್ಲಿ ನಡೆದ ಕುಂದಾಪುರ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಧ್ವಜಾರೋಹಣಗೈದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜ್‌ ಅವರು ಕ್ರೀಡಾಜ್ಯೋತಿ ಬೆಳಗಿಸಿ ದೈಹಿಕ ಸುಧ್ರಡತೆಗಾಗಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ, ದೈಹಿಕ ಸುಧ್ರಡತೆಗಾಗಿ ಕ್ರೀಡೆಗಳು ಜೀವನದಲ್ಲಿ ಅಗತ್ಯವಾಗಿದೆ” ಎಂದು ಹೇಳಿದರು.
ಕುಂದಾಪುರ ಪುರಸಭೆಯ ಸದಸ್ಯ ಪ್ರಭಾಕರ ಕುಂದಾಪುರ, ಉದ್ಯಮಿ ಸತೀಶ್ ಕಾವೇರಿ,ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ, ಕುಂದಾಪುರ ವಲಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಬಲೂನ್ ಮತ್ತು ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಬಿಆರ್ ಸಿ ಸಂತೋಷ ಶೆಟ್ಟಿ,ಸಿಆರ್ ಪಿ ಶಂಕರ್ ಶೆಟ್ಟಿ, ಸೈಂಟ್ ಮೇರಿಸ್ ಪ್ರೌಢಶಾಲೆಯ ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ, ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಷ್ಮಾ ಫೆರ್ನಾಂಡೀಸ್,ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ನೀತಾ ಡಿ ಸೋಜಾ, ಹೋಲಿ ರೋಜರಿ ಕಿಂಡರ್ ಗಾರ್ಟನ್ ಸ್ಕೂಲ್ ಮುಖ್ಯ ಶಿಕ್ಷಕಿ ಶೈಲಾ ಲೂಯಿಸ್ ಮೊದಲಾದವರು ಉಪಸ್ಥಿತರಿದ್ದರು.
ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ಸ್ವಾಗತಿಸಿದರು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ,ಶಾಂತಿ ಬರೆಟ್ಟೋ ವಂದಿಸಿದರು.