ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಮಾಹಿತಿ ಶಿಬಿರ 2022



ಯಾರು ಶ್ರೇಷ್ಠ ವ್ಯಕ್ತಿಗಳಾಗಿರುತ್ತಾರೋ ಅವರೆಲ್ಲಾ ತುಂಬಾ ಸಂಸ್ಕಾರವಂತರು, ಮೌಲ್ಯವಂತರು ಆಗಿರುತ್ತಾರೆ ಎಂದು ಶ್ರೀಮತಿ ಭೀಮವ್ವ ಅಧ್ಯಕ್ಷರು ಗ್ರಾಮ ಪಂಚಾಯತ್ ತಲ್ಲೂರು ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ತಲ್ಲೂರು ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು” ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಸಭಾದ್ಯಕ್ಷತೆಯನ್ನು ಶ್ರೀ ಉಮೇಶ್ ಮೊಗವೀರ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಇವರು ಮಾತಾಡಿ ಮೌಲ್ಯ ಸಾಧನೆಗಾಗಿ ದೀರ್ಘ ಹೋರಾಟ, ಪ್ರಯತ್ನಶೀಲತೆ ಕಷ್ಟಸಹಿಷ್ಣುತೆ ಅಗಾಧ ಆತ್ಮವಿಶ್ವಾಸ ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳಬೇಕು. ಮುಂದೆ ಸಾಧನೆಯ ಶಿಖರವನ್ನು ಏರಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಶ್ರೀ ರಮೇಶ್ ದೇವಾಡಿಗ ವಂಡ್ಸೆ ಖ್ಯಾತ ಉದ್ಯಮಿ ಬೆಂಗಳೂರು ಇವರು ಮಾತಾಡಿ ಪ್ರತಿಭೆ ಎನ್ನುವುದು ಎಲ್ಲರ ಸ್ವತ್ತು ಅದನ್ನು ಕಾಲ ಕಾಲಕ್ಕೆ ನಾನಾ ಪರಿಸ್ಥಿತಿಯನ್ನು ಅವಲೋಕಿಸಿ ಶ್ರದ್ಧೆ ಆಸಕ್ತಿಯಿಂದ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಎಲ್ಲ ಅಡೆ-ತಡೆಯನ್ನು ಮೀರಿ ನಿಲ್ಲುವ ನಿಮ್ಮ ಗುರಿ ಅಚಲವಾಗಿರಬೇಕು. ಅದಕ್ಕಾಗಿ ನಿಮ್ಮ ಮನಸ್ಸು ಮತ್ತು ದೇಹದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ರವಿ ದೇವಾಡಿಗ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇವರು ಮಾತಾಡಿ ಜೀವನದ ಮೌಲ್ಯಗಳು ನೀತಿಯ ಅಂತರಂಗದ ನೆಲೆಗಳಾಗಿರುತ್ತವೆ. ಸಹನೀಯ ಮತ್ತು ಆಪ್ತವಾಗುವ ಸಮಾಜದ ಸಾಧ್ಯತೆಗಾಗಿ ನಾನಾ ರೀತಿಯ ಮೌಲ್ಯಗಳು ರೂಪುಗೊಂಡ ಹಾಗೆ ಆ ಮೌಲ್ಯಗಳ ಕಾರ್ಯರೂಪಿ ನೆಲೆಗಳಾಗಿ ನೀತಿ ಪ್ರಾಮುಖ್ಯತೆ ಪಡೆಯುತ್ತದೆ. ಒಂದು ನೀತಿಯು ಇರುವ ಮೌಲ್ಯ ಬೇರಾವುದೋ ಇರಬಹುದು. ಆದರೆ ಅದರ ಉದ್ದೇಶ ಕೂಡಾ ಸಹನೀಯ ಮತ್ತು ಆಪ್ತಸಮಾಜದ ಸುಧಾರಣೆ ನಿರ್ಮಾಣವೇ ಆಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಶ್ರೀ ಗಿರೀಶ್‍ನಾಯ್ಕ್ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ತಲ್ಲೂರು, ಶ್ರೀ ಮಂಜುನಾಥ್ ಮಯ್ಯ, ಶ್ರೀ ಸುಬ್ರಹ್ಮಣ್ಯ ಐತಾಳ್, ಶ್ರೀ ರಾಧಾಕೃಷ್ಣ ಸೇರಿಗಾರ, ಉಪ್ಪಿನಕುದ್ರು ಯುವಕಮಂಡಲದ ಅಧ್ಯಕ್ಷರಾದ ಶ್ರೀ ಗಿರೀಶ್ ಮೊಗವೀರ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ವಿ, ಶ್ರೀ ರಮೇಶ್ ವಕ್ವಾಡಿ, ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ಶ್ರೀ ಅಬ್ದುಲ್ ರವೂಫ್, ಸಂಪನ್ಮೂಲ ವ್ಯಕ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು| ಸುಧಾ ಭಟ್ ಬ್ರಹ್ಮಾವರ ನಿರೂಪಿಸಿ, ಶ್ರೀಮತಿ ಮಾಲತಿ ವಿ. ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು ಸ್ವಾಗತಿಸಿ, ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆಗೈದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ, ಅಬ್ದುಲ್ ರವೂಫ್ ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿಕೊಟ್ಟರು. ಸುಮಾರು 63 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.