ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸಿಗೆ ಅಡ್ಡದಾರಿ ಯಾವುದೂ ಇಲ್ಲ ಕಠಿಣ ಪರಿಶ್ರಮ , ಶ್ರದ್ಧೆ ಇದ್ದರೆ ಸಾಕು – ಸಿಇಒ ಯುಕೇಶ್ ಕುಮಾರ್

ಕೋಲಾರ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಯಾವುದೇ ಅಡ್ಡದಾರಿ ಯಾಗಲಿ , ಟಿಪ್ಸ್ ಆಗಲಿ ಇಲ್ಲ . ಕಠಿಣ ಪರಿಶ್ರಮ ಹಾಕಿ , ಶ್ರದ್ದೇ , ತ್ಯಾಗ ಮನೋಭಾವ ದಿಂದ ಸಿದ್ಧತೆ ನಡೆಸಿದರೆ ಮಾತ್ರ ಉತ್ತೀರ್ಣರಾಗಿ ನಾಗರಿಕ ಸೇವಾ ಅಧಿಕಾರಿಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ತಿಳಿಸಿದರು.

ನಗರದಲ್ಲಿ ಡಿಎಂಆರ್‌ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಆರಂಭಿಸಿರುವ ಯುಪಿಎಸ್‌ಸಿ – ಕೆಪಿಎಸ್‌ಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಮೊದಲ ಬ್ಯಾಚ್‌ನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಐದು ರ್ವಗಳಲ್ಲಿನ ಪ್ರಶ್ನೆ ಪತ್ರಿಕೆ ಹಾಗೂ ಅಗ್ರಬ್ಯಾಂಕ್ ಪಡೆದವರು ಬರೆದ ಉತ್ತರ ಪತ್ರಿಕೆಗಳನ್ನು ಓದಬೇಕು. ಜತೆಗೆ ತರಬೇತಿ ವೇಳೆ ಯಾವುದೇ ಅನುಮಾನ ಬಂದಾಗ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಬೇಕು. ಆನ್‌ಲೈನ್‌ನಲ್ಲೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾನು ಕೂಡ ನಿಮ್ಮಂತೆ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದೆ . 2012 ರಲ್ಲಿ ಉತ್ತೀರ್ಣನಾಗಿ ಐಎಎಸ್ ಅಧಿಕಾರಿಯಾದೆ . ಪ್ರತಿ ವರ್ಷ 12 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ. ಯುಪಿಎಸ್‌ಸಿ ಪರೀಕ್ಷೆ ಎಂಬುದು ಮ್ಯಾರಥಾನ್ ಓಟವಿದ್ದಂತೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ , ಸದುದ್ದೇಶದಿಂದ , ನಿಸ್ವಾರ್ಥ ಸೇವೆಗಾಗಿ ಡಿಎಂಆರ್ ಸಂಸ್ಥೆ ಆರಂಭಿ ಸಲಾಗಿದೆ. ಯಾವುದೇ ಲಾಭದ ಉದ್ದೇಶ ಇಲ್ಲ ಎಂದು ಹೇಳಿದರು. ದೂರದ ನಗರಗಳಿಗೆ ತರಬೇತಿಗೆ ಹೋಗಲು ಸಾಧ್ಯವಾಗದ ಅಭ್ಯರ್ಥಿಗಳಿಗಾಗಿ ಈ ಸಂಸ್ಥೆ ಆರಂಭಿಸಲಾಗಿದೆ .

ಒದಗಿಸಿರುವ ಸೌಲಭ್ಯ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿ . ಮೊದಲ ಬ್ಯಾಚ್‌ನವರು ಕೋಲಾರ ಹಾಗೂ ನಮಗೆ ಹೆಮ್ಮೆ ತರಬೇಕು.

ಆಗ ಸಂಸ್ಥೆ ಆರಂಭಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಮೊದಲ ಬ್ಯಾಚ್‌ನಲ್ಲಿ 70 ವಿದ್ಯಾರ್ಥಿಗಳು ಇದ್ದಾರೆ . ಪ್ರತಿ ವಾರಾಂತ್ಯ ಶನಿವಾರ ಹಾಗೂ ಭಾನುವಾರ ತರಗತಿಗಳು ನಡೆಯಲಿವೆ . ಮೂರು ತಿಂಗಳು ತರಬೇತಿ ಇರಲಿದೆ ಎಂದು ಮಾಹಿತಿ ನೀಡಿದರು .

ಪಾಠ ಮಾಡಿದ ಎಸ್ಪಿ :

ಪೊಲೀಸ್ ಅಧಿಕಾರಿಯಾಗುವ ಮುನ್ನ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಎಸ್ಪಿ ಡಿ.ದೇವರಾಜ್ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಂಬಂಧ ಅಭ್ಯರ್ಥಿಗಳಿಗೆ ಪಾಠ ಮಾಡಿದರು. ಸಂವಿಧಾನ , ವಿಜ್ಞಾನ ಸೇರಿದಂತೆ ಹಲವು ವಿಷಯಗಳಲ್ಲಿ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳ ಸಂಬಂಧ ಮಾಹಿತಿ ನೀಡಿದರು . ಪ್ರಶ್ನೆ ಕೇಳುತ್ತಾ ಸಂವಾದ ನಡೆಸಿದರು. ಬಣ್ಣದ ಪೆನ್ ಹಿಡಿದು ಬೋರ್ಡ್ ಮೇಲೆ ಬರೆದು ತೋರಿಸಿದರು .

ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋನಿಯಾ ವರ್ಣಿಕರ್‌ ಇದ್ದರು .