ಕೆಜಿಎಫ್ ರಸ್ತೆ ಅಭಿವೃದ್ದಿಗೆ ಅಡ್ಡಿಯಾದ ಮರ,ವಿದ್ಯುತ್ ಕಂಬಗಳ ತೆರವಿಗೆ ಸೂಚನೆ:ಬೆಸ್ಕಾಂ,ಅರಣ್ಯ,ರಾಜ್ಯ ಹೆದ್ದಾರಿ ಯೋಜನೆ ಅಧಿಕಾರಿಗಳೊಂದಿಗೆ ಶಾಸಕಿ ರೂಪಕಲಾ ಚರ್ಚೆ

ಕೋಲಾರ:- ಕೆಜಿಎಫ್ ನಗರದ ಸಮಗ್ರ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿರುವ ಶಾಸಕಿ ರೂಪಕಲಾ ರಸ್ತೆ ಕಾಮಗಾರಿಗೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳ ಸ್ಥಳಾಂತರ, ಮರಗಳ ತೆರವು ಕಾರ್ಯಾಚರಣೆ ಕುರಿತು ಶನಿವಾರ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಅರಣ್ಯ,ಬೆಸ್ಕಾಂ, ರಾಜ್ಯ ಹೆದ್ದಾರಿ ಯೋಜನೆಗಳ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ಕ್ರಮಕ್ಕೆ ತಾಕೀತು ಮಾಡಿದರು.
ಮಿನಿ ವಿಧಾನಸೌಧ ಸಿದ್ದಗೊಂಡಿದ್ದು, ಸೆಪ್ಟೆಂಬರ್ 2ನೇ ವಾರ ಉದ್ಘಾಟನೆಗೆ ರಾಜ್ಯದ ಕಂದಾಯ ಸಚಿವರು ದಿನಾಂಕ ನೀಡುವುದಾಗಿ ತಿಳಿಸಿದ್ದು ಆ ವೇಳೆಗೆ ಕೆಜಿಎಫ್ ನಗರದಲ್ಲಿ ಇದೀಗ ಕಾಮಗಾರಿ ನಡೆಯುತ್ತಿರುವ ಎಲ್ಲಾ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಸಿದ್ದವಾಗುವಂತೆ ಕ್ರಮವಹಿಸಲು ಸೂಚಿಸಿದರು.
ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಬೆಸ್ಕಾಂ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಗತ್ಯವಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ಮಾಡಬೇಕೇ ಹೊರತು ಅನಗತ್ಯವಾಗಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದು ಬೇಡ ಎಂದು ಬೆಸ್ಕಾಂ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರದಿಂದಲೇ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು. ಮಿನಿವಿಧಾನಸೌಧ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಚಿವರು ಆಗಮಿಸುವುದರಿಂದ ರಸ್ತೆ ಕಾಮಗಾರಿ ಪೂರ್ಣಗೊಂಡಿರಬೇಕು. ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಸಚಿವರು ಎಲ್‍ಐಸಿ ಕಚೇರಿ ಮಾರ್ಗದ ಮೂಲಕ ಮಿನಿವಿಧಾನಸೌಧಕ್ಕೆ ಹೋಗುವುದರಿಂದ ಅಷ್ಟರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿರಬೇಕು. ಅಷ್ಟರಲ್ಲಿ ಬೆಸ್ಕಾಂ ಅಧಿಕಾರಿಗಳು ರಸ್ತೆ ಕಾಮಗಾರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯವಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಕೆಲಸ ಮಾಡಬೇಕು, ಕಾಮಗಾರಿ ಅರ್ಧಂಬರ್ಧ ಮಾಡುವುದು ಬೇಡ, ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಂಡಿರಬೇಕು ಎಂದು ಶಾಸಕಿ ರೂಪಾಶಶಿಧರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಜಿಎಫ್ ಕೆಲವೊಂದು ಜಾಗಗಳಲ್ಲಿ ದೇವಮೂಲೆಯಲ್ಲಿ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‍ಫಾರ್ಮರ್‍ಗಳನ್ನು ಬೆಸ್ಕಾಂ ಅಧಿಕಾರಿಗಳು ಅಳವಡಿಸಿದ್ದೀರಿ ಮೊದಲು ಅದನ್ನು ಬದಲಾಯಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ಶಾಸಕರು ಸೂಚಿಸಿ, ಮರಗಳನ್ನು ತೆರವು ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯಕ್ಕೆ ಅಗತ್ಯವಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಈ ಕಾರ್ಯ ಭಾನುವಾರ ಮಾಡಿ ಎಂದು ಸೂಚಿಸಿದರು.
ನನ್ನ ಅವಧಿಯಲ್ಲಿ ಕೆಜಿಎಫ್‍ನ ಮಿನಿವಿಧಾನ ಸೌಧದ ಸುತ್ತಲೂ ಸಿಸಿ ಕ್ಯಾಮರಾ ಹಾಗೂ ಸೋಲಾರ್ ದೀಪಗಳನ್ನು ಅಳವಡಿಸುವುದರೊಂದಿಗೆ ಮಿನಿವಿಧಾನಸೌಧ ಹಿಂಬದಿಯ ಜಾಗದಲ್ಲಿ ಪಾರ್ಕ್ ನಿರ್ಮಾಣ, ಸಾರ್ವಜನಿಕರ ವಾಹನ ನಿಲುಗಡೆಗೆ ಪ್ರತ್ಯೇಕ ವಾಹನ ನಿಲ್ದಾಣ, ಹಾಗೂ ಸುತ್ತಲೂ ಸಾರ್ವಜನಿಕರಿಗೆ ಅನುಕೂಲವಾಗುವ ಗಿಡಗಳನ್ನು ನೆಡುವ ಮೂಲಕ ಸುಂದರ ಪರಿಸರ ನಿರ್ಮಾಣಕ್ಕೆ ಕ್ರಮವಹಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಟೇಷನ್ ರಸ್ತೆಯಲ್ಲಿ 18 ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಬೇಕು ಹಾಗೂ ಎಲ್‍ಐಸಿ ರಸ್ತೆಯಲ್ಲಿ ಎಷ್ಟು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕೆಂದು ಇನ್ನೂ ಪರಿಶೀಲನೆ ಮಾಡಿಲ್ಲ, ಇವತ್ತೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡುತ್ತೇನೆಂದು ಬೆಸ್ಕಾಂ ಅಧಿಕಾರಿ ಎಇಇ ಹೇಮಲತಾ ಶಾಸಕರ ಗಮನಕ್ಕೆ ತಂದರು.
ಒಂದು ಬಾರಿ ರಸ್ತೆ ಕಾಮಗಾರಿ ಮಾಡಿದ ಮೇಲೆ 25 ವರ್ಷ ಯಾವುದೇ ಸಮಸ್ಯೆ ಎದುರಾಗಬಾರದು, ಅದಕ್ಕೆ ತಕ್ಕಂತೆ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ ಎಂದರು.
ರಸ್ತೆ ಅಭಿವೃದ್ದಿಗೆ
15 ಕೋಟಿ ರೂ
ತಮ್ಮ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆಗಳ ಅಭಿವೃದ್ದಿಗೆ 15 ಕೋಟಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 6 ಕೋಟಿ ರೂ, ಮತ್ತು ಎಸ್‍ಹೆಚ್‍ಡಿಪಿ ಯೋಜನೆಯಡಿ ನಗರಭಾಗದ ರಸ್ತೆಗಳ ಅಭಿವೃದ್ದಿಗೆ 10 ಕೋಟಿ ಬಿಡುಗಡೆಯಾಗಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯಿಂದ ರಾಮಕುಪ್ಪಂ ವರೆಗಿನ ರಸ್ತೆ ಅಭಿವೃದ್ದಿಗೆ 4 ಕೋಟಿ ರೂ ಮೀಸಲಿಡಲಾಗಿದೆ, ಬೇತಮಂಗಲ ದಿಂದ ವೆಂಕಟಗಿರಿಕೋಟೆ ರಾಷ್ಟ್ರೀಯ ಹೆದ್ದಾರಿ 95ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1 ಕೋಟಿ ರೂ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಇದಲ್ಲದೇ ಕೆಜಿಎಫ್‍ನಲ್ಲಿ ದ್ವಿಪಥ ರಸ್ತೆಗೆ 4 ಕೋಟಿರೂ ಬಿಡುಗಡೆ ಮಾಡಿಸಲಾಗಿದೆ ಎಂದ ಅವರು, ಬೇತಮಂಗಲ-ಕ್ಯಾಸಂಬಳ್ಳಿ ರಸ್ತೆಗೆ 2.30 ಕೋಟಿ ರೂ ಹಾಗೂ ಒಡೆನಿಯಲ್ ರಸ್ತೆ ಸಂಪರ್ಕಕ್ಕೆ 70 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಯಲ್ಲಿ ಲೋಪವಾಗದಂತೆ ಪೂರ್ಣಗೊಳಿಸಿ ಎಂದರು.
ಸಭೆಯಲ್ಲಿ ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಪಿಡಬ್ಲ್ಯೂಡಿ ವಿದ್ಯುತ್ ವಿಭಾಗದ ಎಇಇ ಪರಮೇಶ್ವರ್, ಕೆಜಿಎಫ್ ಬೆಸ್ಕಾಂ ಎಇಇ ಹೇಮಲತಾ, ಗುತ್ತಿಗೆದಾರ ಚನ್ನಾರೆಡ್ಡಿ, ಆರ್‍ಎಫ್‍ಒ ಮಂಜುನಾಥ್ ಇದ್ದರು.