ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎ ದರ್ಜೆ ಗೌರವಕ್ಕೆ ಭಾಜನ:ಅಫೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿಯ ಹೆಗ್ಗಳಿಕೆ – ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇದೇ ಮೊದಲ ಬಾರಿಗೆ ಅಫೆಕ್ಸ್ ಬ್ಯಾಂಕಿನಿಂದ ರಾಜ್ಯದ ಎ ದರ್ಜೆ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹರ್ಷವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು 1954ರಲ್ಲಿ ಆರಂಭವಾದ ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಅಪೆಕ್ಸ್ ಬ್ಯಾಂಕಿನಿಂದ ಎ ದರ್ಜೆ ಬ್ಯಾಂಕ್ ಎಂಬ ಗೌರವ ಸಿಕ್ಕಿದ್ದು ಇದಕ್ಕೆ ಕಾರಣರಾದ ಬ್ಯಾಂಕಿನ ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ಪ್ಯಾಕ್ಸ್ ನ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ಬ್ಯಾಂಕಿಗೆ ಬಿ ದರ್ಜೆಯಲ್ಲಿ ರಾಜ್ಯಕ್ಕೆ ಪ್ರಥಮ ಎಂಬ ಗೌರವವಿತ್ತು. ಆದರೆ ಈ ಬಾರಿ ಎ ದರ್ಜೆ ಗೌರವ ದೊರಕಿದ್ದು ಮಂಗಳೂರು, ಬೆಳಗಾಂ ನಂತರ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮೂರನೇ ಸ್ಥಾನದ ಗೌರವವನ್ನು ಗಳಿಸಿಕೊಂಡಿದೆ.
ಎ ದರ್ಜೆಯಲ್ಲಿ ಪ್ರಥಮ ಸ್ಥಾನಕ್ಕೆ ಏರಲು ಬ್ಯಾಂಕಿನ ಸಿಬ್ಬಂದಿ, ಪ್ಯಾಕ್ಸ್‍ಗಳ ಆಡಳಿತ ಮಂಡಳಿ ಮತ್ತು ಸಿಇಓ ಗಳು ಬದ್ದತೆಯಿಂದ ಕೆಲಸ ಮಾಡುವ ಮೂಲಕ ಬ್ಯಾಂಕಿನ ಘನತೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.
2004ರ ಮೊದಲು ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿಸಿ ಬ್ಯಾಂಕ್ ಜೊತೆ ವಿಲೀನವಾಗುವ ದುಸ್ಥಿತಿಯನ್ನು ತಲುಪಿತ್ತು ಆದರೆ ಇಂದು ರಾಜ್ಯದ ಮೊದಲ ಬ್ಯಾಂಕುಗಳ ಪಟ್ಟಿಯಲ್ಲಿ ಗೌರವಗಳಿಸಿಕೊಂಡಿದೆ.
ಬ್ಯಾಂಕಿನ ಎನ್.ಪಿ.ಎ. ಇಂದು ಶೇ.2ಕ್ಕಿಂತಲೂ ಕಡಿಮೆಯಾಗಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಇಂದು ಸಮಾಜದ ಕಟ್ಟಕಡೆಯ ಬಡವರಿಗೂ ಸಾಲಸೌಲಭ್ಯ ಒದಗಿಸುವ ಮೂಲಕ ಮಹಿಳೆಯರನ್ನು ಮೀಟರ್ ಬಡ್ಡಿ ಶೋಷಣೆಯಿಂದ ತಪ್ಪಿಸುವಲ್ಲಿ ಪ್ರಮುಖಪಾತ್ರವಹಿಸಿದೆ ಎಂದು ತಿಳಿಸಿದ್ದಾರೆ.
ಸಹಕಾರಿ ರಂಗದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸದಸ್ಯತ್ವ ನೀಡುವ ಗುರಿಯೊಂದಿಗೆ ಬ್ಯಾಂಕನ್ನು ಮುನ್ನೆಡಸಲು ಆಡಳಿತ ಮಂಡಳಿ ಸಹಕಾರ ನೀಡುತ್ತಿದ್ದು ಸಿಬ್ಬಂದಿಯೂ ಸಹ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡೂ ಜಿಲ್ಲೆಗಳಿಂದ 7.5ಲಕ್ಷ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿದ ಗೌರವ ಡಿಸಿಸಿ ಬ್ಯಾಂಕಿನದ್ದಾಗಿದೆ ಎಂದು ತಿಳಿಸಿದ್ದಾರೆ.
ಪ್ಯಾಕ್ಸ್‍ಗಳ ಗಣಕೀಕರಣ ಮತ್ತು ಗಣಕೀಕೃತ ಲೆಕ್ಕ ಪರಿಶೋಧನೆಯಲ್ಲಿ ರಾಜ್ಯದಲ್ಲೆ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಇ-ಶಕ್ತಿ ಅನುಷ್ಠಾನದಲ್ಲಿಯೂ ಬ್ಯಾಂಕೇ ಮುಂದಿದ್ದು ಈ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ನಬಾರ್ಡ್ ಪರಿಶೀಲನೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೋಲಾರ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದ ಗೌರವಕ್ಕೆ ಬಾಜವಾಗಿದೆ. ಆದರೆ ಠೇವಣಿ ಸಂಗ್ರಹದಲ್ಲಿ ನಾವು ನಿರೀಕ್ಷಿತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದ್ದಾರೆ.
ಬ್ಯಾಂಕಿನ ಸಿಬ್ಬಂದಿ ಬಧ್ಧತೆಯಿಂದ ನೀಡಿರುವ ಗುರಿಯಂತೆ ಠೇವಣಿ ಸಂಗ್ರಹಿಸಿ ಬ್ಯಾಂಕಿನ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.