ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಇಒ ವಿ.ಉಮಾದೇವಿ

ಶ್ರೀನಿವಾಸಪುರ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಇಒ ವಿ.ಉಮಾದೇವಿ ಹೇಳಿದರು.
ಪಟ್ಟಣದ ರಂಗಾರಸ್ತೆ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದೆ. ಹೆಜ್ಜೆ ಹೆಜ್ಜೆಗೂ ವಿಜ್ಞಾನದ ಪ್ರಯೋಜನ ಪಡೆಯುತ್ತಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶ ಪಡೆದು ಪ್ರಯೋಗಶೀಲರಾಗಬೇಕು. ಹೊಸ ಹೊಸ ಕನಸು ಕಂಡು, ನನಸಾಗಿಸಲು ನಿರಂತರ ಪ್ರಯತ್ನ ಮಾಡಬೇಕು. ಅದಕ್ಕೆ ಪೂರಕವಾಗಿ ವಿಜ್ಞಾನಿಗಳ ಜೀವನ, ಸಾಧನೆ ಕುರಿತು ಅಧ್ಯಯನ ಮಾಡಬೇಕು. ಅವರಿಂದ ಸ್ಫೂರ್ತಿ ಪಡೆದು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕು. ಪ್ರೇಕ್ಷಕರ ಚಪ್ಪಾಳೆ ನಿಜವಾದ ಬಹುಮಾನ ಎಂಬುದನ್ನು ಮರೆಯಬಾರದು. ಸಾಧನೆಗೆ ಸಮರ್ಪಣಾ ಭಾವ ಹಾಗೂ ಪರಿಶ್ರಮ ಮುಖ್ಯ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಿ, ಪ್ರೋತ್ಸಾಹಿಸಬೇಕು. ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರದೆ, ತಮಗೆ ಇಷ್ಟವಾದ ವಿಷಯ ಕಲಿಯಲು ಅವಕಾಶ ನೀಡಬೇಕು. ಶಾಲೆ ಮತ್ತು ಸಮುದಾಯ ಜತೆಯಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.
ಬಿಆರ್‍ಸಿ ಸಮನ್ವಯಾಧಿಕಾರಿ ಕೆ.ಸಿ.ವಸಂತ, ಮುಖ್ಯ ಶಿಕ್ಷಕ ಟಿ.ವಿ.ಬೈರೆಡ್ಡಿ, ಇಸಿಒ ಹನುಮೇಗೌಡ, ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ಮುಖ್ಯ ಶಿಕ್ಷಕ ಆನಂದ ಬಾಬು, ಶಿಕ್ಷಕರಾದ ಬಾಲಕೃಷ್ಣರಾವ್, ಕೆ.ಎನ್.ರಾಮಚಂದ್ರ, ನವೀನ್ ಕುಮಾರ್, ಶಿಕ್ಷಕಿಯರಾದ ಶಾರದಮ್ಮ, ಭಾಗ್ಯಲಕ್ಷ್ಮಿ ಇದ್ದರು.