ಶ್ರೀನಿವಾಸಪುರ:ಮಾವಿನಲ್ಲಿ ಸಮಗ್ರ ಬೆಳೆ ನಿರ್ವಹಣೆ – ಹೊರಾಂಗಣಾ ತರಬೇತಿ ಕಾರ್ಯಕ್ರಮ

ಶ್ರೀನಿವಾಸಪುರ: ರೋಗನಿರೋಧಕ ಶಕ್ತಿಯೊಂದಿಗೆ ಬೆಳೆಯು ಆರೋಗ್ಯಕರವಾಗಿ ಬೆಳೆದು ಅಧಿಕ ಇಳುವರಿ ನೀಡಬೇಕಾದರೆ ಬೆಳೆಗಳಿಗೆ ಸಕಾಲದಲ್ಲಿ ಸವರುವಿಕೆ ಮತ್ತು ಸಮತೋಲನ ಪೋಷಕಾಂಶಗಳನ್ನು ಒದಗಿಸುವುದು ಅವಶ್ಯ . ಆದರೆ ಕೆಲವೇ ರೈತರು ಲಘು ಪೋಷಕಾಂಶಗಳ ಮಹತ್ವವನ್ನರಿತು ಬಳಸುತ್ತಿದ್ದಾರೆ . ಆದ್ದರಿಂದ ಗುಣಮಟ್ಟದ ಬೆಳೆ ಹಾಗೂ ಹೆಚ್ಚಿನ ಇಳುವರಿಗಾಗಿ ಸವರುವಿಕೆ ಮಾಡುವುದು ಅವಶ್ಯವಾಗಿದೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಅಂಗವಾಗಿ ಮಾವು ಬೆಳೆಯ ಎಲೆಗಳಿಗೆ ಸಿಂಪಡಿಸಬಹುದಾದ ಮಾವು ಸ್ಪೆಷಲ್ ಅತ್ಯಂತ ಉಪಯುಕ್ತವಾಗಿದೆ . ಈ ನಿಟ್ಟಿನಲ್ಲಿ ವಿಸ್ತರಣ ಶಿಕ್ಷಣ ಘಟಕ ( ಕೋಲಾರ ) , ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ರವರ ವತಿಯಿಂದ ಮಾವಿನಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಹೊರಾಂಗಣಾ ತರಬೇತಿ ಕಾರ್ಯಕ್ರಮವನ್ನು ಶ್ರೀನಿವಾಸಪುರ ತಾಲೂಕಿನ ಬೂರುಗಾನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು . ತೋಟಗಾರಿಕೆ ವಿಜ್ಞಾನಿಗಳಾದಂತಹ ಶ್ರೀಮತಿ ಸಿಂಧು , ಕೆ . ರವರು ಮಾವಿನಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳು . ಮಾವಿನ ಮರ ಸವರುವಿಕೆ ಹಾಗೂ ಲಘುಪೋಷಕಾಂಶಗಳ ಮಿಶ್ರಣವಾದ ಮಾವು ಸ್ಪೆಷಲ್ ಕುರಿತು ಮಾಹಿತಿ ನೀಡಿದರು . ಡಾ . ದೀಅಪ್ . ಎಸ್ . ವಿಜ್ಞಾನಿಗಳು ( ಕೃಷಿ ವಿಸ್ತರಣಾ ) ರವರು ಮಾವಿನಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಿದರು ಮತ್ತು ಮಾವಿನಲ್ಲಿ ಸವರುವಿಕೆ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು . ಈ ಕಾರ್ಯಕ್ರಮದಲ್ಲಿ 25 ಜನ ರೈತರು ಪಾಲ್ಗೊಂಡಿದ್ದರು . ಮಾವಿನಲ್ಲಿ ರೆಂಬೆಗಳು ಒತ್ತೊತ್ತಾಗಿ ಬೆಳೆದಾಗ ಅವುಗಳಲ್ಲಿ ಕೆಲವೊಂದು ರೆಂಬೆಗಳನ್ನು ಕತ್ತರಿಸಿ ವಿರಳಗೊಳಿಸಿದರೆ ಸೂರ್ಯನ ಬೆಳಕು ಒಳಭಾಗದಲ್ಲಿ ಬೀಳುವಂತಾಗಿ ಒಳಭಾಗದಲ್ಲೂ ಕಾಯಿಕಚ್ಚುತ್ತವೆ . ಇದರಿಂದ ಇಳುವರಿ ಹಾಗೂ ಹಣ್ಣಿನ ಗುಣಮಟ್ಟ ಹೆಚ್ಚಾಗುತ್ತವೆ . ಗಿಡಗಳಿಗೆ 5-6 ವರ್ಷವಾದಾಗ ಮೊದಲ ವರ್ಷ ಮಧ್ಯದ ಒಂದೆರೆಡು ರೆಂಬೆಗಳನ್ನು ತೆಗೆದು ತೆರೆವು ಮಾಡಬೇಕು . ನಂತರದ ವರ್ಷಗಳಲ್ಲಿ ಇತರ ರೆಂಬೆಗಳನ್ನು ವಿರಳಗೊಳಿಸಲು ಕತ್ತರಿಸಬೇಕು . ಕತ್ತರಿಸಿದ ಭಾಗಗಳಿಗೆ ಶಿಲೀಂಧ್ರ ನಾಶಕ + ಕೀಟನಾಶಕದ ಮುಲಾಮನ್ನು ಲೇಪಿಸುವುದು ಅವಶ್ಯ . ಹಣ್ಣಿನ ಕೊಯ್ದು ಆದನಂತರ ಜುಲೈ- ಆಗಸ್ಟ್ ತಿಂಗಳುಗಳು ಕತ್ತರಿಸಲು ಸೂಕ್ತ ಸಮಯ .