ಪತ್ರಕರ್ತರ ಸಂಘದಿಂದ ಮನೆ ಮನೆಗೂ ತ್ರಿವರ್ಣ ಧ್ವಜ ಕಾರ್ಯಕ್ರಮ: ಮಾಜಿ ಯೋಧರಿಗೆ ಸೌಲಭ್ಯ ಸವಲತ್ತು ಸಿಗುವಂತೆ ಮಾಡಿ : ಮಾಜಿ ಯೋಧ ರಹಮತ್ ಉಲ್ಲಾ

ಕೋಲಾರ: ಮಾಜಿ ಯೋಧರಿಗೆ ಸರಕಾರವೇ ಘೋಷಿಸಿರುವ ಸೌಲಭ್ಯ ಮತ್ತು ಸಲವತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ, ಸ್ವಾತಂತ್ರ‍್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈಗಲಾದರೂ ಎಲ್ಲಾ ಮಾಜಿ ಯೋಧರಿಗೆ ಸೌಲಭ್ಯ ಸವಲತ್ತುಗಳು ಸಿಗುವಂತಾಗಲಿ ಎಂದು ಮಾಜಿ ಯೋಧ ರಹಮತ್ ಉಲ್ಲಾ ಮನವಿ ಮಾಡಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗೆ ತ್ರಿವರ್ಣ ಧ್ವಜ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರಭಕ್ತಿ ಕುರಿತು ಭಾರತ ಸೇವಾದಳದ ಸಹಯೋಗದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಹದಿನೆಂಟು ವಯಸ್ಸಿಗೆ ಸೇನೆಗೆ ಸೇರಿ ಮೂರು ಯುದ್ಧಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ, ನಿವೃತ್ತರಾಗಿ ೪೫ ವರ್ಷ ಕಳೆದರೂ ತಮಗೆ ಇಂದಿಗೂ ನಿವೇಶನ ಜಮೀನು ಸಿಕ್ಕಿಲ್ಲ, ಇದು ತಮ್ಮೊಬ್ಬರ ಕಥೆಯಲ್ಲ, ಬಹುತೇಕ ಮಾಜಿ ಯೋಧರ ವ್ಯಥೆಯಾಗಿದೆ, ಇದನ್ನು ಬಗೆಹರಿಸಲು ಸರಕಾರ, ಜಿಲ್ಲಾಡಳಿತ ಮುಂದಾಗಬೇಕು, ಪತ್ರಕರ್ತರು ಸಹಕರಿಸಬೇಕೆಂದು ಕೋರಿದರು.

ಒಮ್ಮೆ ಕಾರ್ಪೊರೇಟರ್ ಆದರೆ ಸಾಕು ಅವರಿಗೆ ಹಾರ ಹಾಕಿ ಕಾಲಿಗೆ ಬೀಳುತ್ತಾರೆ. ಆದರೆ, ದೇಶದ ರಕ್ಷಣೆಗಾಗಿ ಎಲ್ಲಾ ತ್ಯಾಗ ಮಾಡಿ ಗಡಿ ಕಾಯುವ ನಮ್ಮನ್ನು ಯಾರೂ ಕೇಳುವವರಿಲ್ಲ ಎಂದು ವ್ಯಕ್ತಪಡಿಸಿದರು.

ಸೇನೆಯಲ್ಲಿದ್ದಾಗ ಆಗ ಸಂಬಳ ನನಗೆ ತಿಂಗಳಿಗೆ 37 ಸಿಗುತಿತ್ತು. ಈಗ ಪಿಂಚಣಿ 15 ಸಾವಿರ ಸಿಗುತ್ತಿದೆ. ಉತ್ತಮ ಸೌಲಭ್ಯ, ಗೌರವ ಸಿಕ್ಕಿದರೆ ಹೆಚ್ಚಿನ ಜನ ಸೇನೆಗೆ ಹೋಗುತ್ತಾರೆ ಎಂದು ಹೇಳಿದರು.

ಹಿಂದೆ ಸೇನೆಯಲ್ಲಿ ಸತ್ತರೂ ಕುಟುಂಬದವರಿಗೆ, ಸಾರ್ವಜನಿಕರಿಗೆ ಹೇಳುತ್ತಿರಲಿಲ್ಲ. ಹೇಳಿದರೆ ಭಯಬಿದ್ದು ಸೇನೆಗೆ ಕಳುಹಿಸುವುದಿಲ್ಲ ಎಂಬ ಆತಂಕ. ಈಗ ತಕ್ಷಣವೇ ಮಾಹಿತಿ ಸಿಗುತ್ತದೆ ಎಂದರು.

ಮುಳಬಾಗಿಲಿನಲ್ಲಿ ನಾನು  1960ರಲ್ಲಿ ಸೇನೆ ಸೇರಿದೆ. 1962ರಲ್ಲಿ ಭಾರತ-ಚೀನಾ, 65ರಲ್ಲಿ ಭಾರತ-ಪಾಕಿಸ್ತಾನ, 1971ರಲ್ಲಿ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಪಾಲ್ಗೊಂಡಿದ್ದೆ. 1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ವೇಳೆ ನಮ್ಮಲ್ಲಿ ಆಗ ಕಡಿಮೆ ಯೋಧರಿದ್ದರು. ಆದರೂ ಎದುರಾಳಿಯ 21 ಟ್ಯಾಂಕ್ ವಶಕ್ಕೆ ಪಡೆದೆವು.  1975ರಲ್ಲಿ ನಿವೃತ್ತನಾದೆ ಎಂದರು.

ಚೀನಾ ವಿರುದ್ಧದ ಯುದ್ಧದಲ್ಲಿ ಬಾಕ್ಸ್ನಲ್ಲಿ ನೀಡುತ್ತಿದ್ದ ಊಟವನ್ನು ಮೂರು ದಿನ ಇಟ್ಟುಕೊಂಡು ತಿನ್ನಬೇಕಿತ್ತು. ಒಂದು ಲೀಟರ್ ನೀರು ಕೊಡುತ್ತಿದ್ದರು. ಚೀನಾದ ಬಹಳ ಯೋಧರು ಸತ್ತರು ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ರಾಷ್ಟ್ರ ಧ್ವಜದ ಮಹತ್ವ, ಇತಿಹಾಸ, ಧ್ವಜ ಸಂಹಿತೆ, ಧ್ವಜಕ್ಕೆ ಕೊಡಬೇಕಾದ ಗೌರವ, ಪ್ರತಿ ನಾಗರೀಕರ ಕರ್ತವ್ಯ ಜವಾಬ್ದಾರಿಗಳ ಕುರಿತಂತೆ ಉಪನ್ಯಾಸ ನೀಡಿದರು.

ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಸೈನಿಕರು ಕಷ್ಟಪಟ್ಟು ತಮ್ಮ ಪ್ರಾಣದ ಹಂಗನ್ನು ತೊರೆದು ಗಡಿ ಕಾಯುವುದರೊಂದಿಗೆ ಶತ್ರುಗಳಿಂದ ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆ. ಅಂತಹ ಸೈನಿಕರನ್ನೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಜಾಗೃತಿ, ಮಾಹಿತಿ ಹೋಗಿ ಬರೀ ಮನರಂಜನೆ ಮಾತ್ರ ಉಳಿದಿದೆ. ಯಾರನ್ನೋ ಇಂದ್ರ ಚಂದ್ರ ಎನ್ನುತ್ತೇವೆ. ನಿಜವಾದ ಇಂದ್ರಚಂದ್ರರು ರಹಮತ್ ಉಲ್ಲಾ ಅವರಂಥವರು ಎಂದರು.

ಸರ್ಕಾರಗಳು ಸಹ ಮಾಜಿ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ಪತ್ರಕರ್ತರು ಮತ್ತು ಭಾರತ ಸೇವಾದಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾರತ ಸೇವಾದಳ ವತಿಯಿಂದ ಅತಿಥಿಗಳಿಗೆ ಧ್ವಜ ಸಂಹಿತೆ ಪುಸ್ತಕ ಮತ್ತು ಎಲ್ಲಾ ಪತ್ರಕರ್ತರಿಗೆ ರಾಷ್ಟ್ರ ಧ್ವಜಗಳನ್ನು ವಿತರಿಸಲಾಯಿತು.