ನೌಕರರ ಸಂಘದಿಂದ ಹರ್‍ಘರ್ ತಿರಂಗ ಅಭಿಯಾನಕ್ಕೆ ಚಾಲನೆ
ಪ್ರತಿ ನೌಕರರ ಮನೆ ಮೇಲೂ ಧ್ವಜ ಹಾರಿಸೋಣ-ಸುರೇಶ್‍ಬಾಬು

ಕೋಲಾರ:- ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದಡಿ ಪ್ರತಿ ಸರ್ಕಾರಿ ನೌಕರರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಗೌರವ ಅರ್ಪಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮನವಿ ಮಾಡಿದರು.
ಗುರುವಾರ ಜಿಲ್ಲಾ ನೌಕರರ ಭವನದ ಮುಂಭಾಗ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಧ್ವಜಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶ ಗುಲಾಮಗಿರಿಯಿಂದ ಬಿಡುಗಡೆಯಾಗಿ ಸ್ವಾತಂತ್ರ್ಯಗೊಂಡ ಈ ದಿನವನ್ನು ಅತ್ಯಂತ ಸಡಗರಿಂದ ಆಚರಿಸಬೇಕಾಗಿದೆ, 75 ವರ್ಷಗಳ ಸಂಭ್ರಮ ಇದಾಗಿದ್ದು, ಸರ್ಕಾರಿ ನೌಕರರು ತಮ್ಮ ಮನೆಗಳ ಮೇಲೆ ಮಾತ್ರವಲ್ಲ, ತಮ್ಮ ನೆರೆಹೊರೆಯವರ ಮನೆಗಳ ಮೇಲೂ ಸತತ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸುವ ಮೂಲಕ ಗೌರವ ಅರ್ಪಿಸೋಣ ಎಂದರು.
ಆ.13 ರ ಬೆಳಗ್ಗೆ 6 ಗಂಟೆಯಿಂದ ಆ.15 ರ ಸಂಜೆ 6 ಗಂಟೆಯವರೆಗೂ ಧ್ವಜ ಹಾರಿಸಲು ಅವಕಾಶವಿದೆ, ಈ ಅಪರೂಪದ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳಬೇಡಿ, ನಮ್ಮ ದೇಶ,ನಮ್ಮ ಗೌರವವಾಗಿದೆ, ರಾಷ್ಟ್ರಪ್ರೇಮ ತೋರುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ ಎಂದರು.
ಇದು ರಾಷ್ಟ್ರಹಬ್ಬ ಮಾತ್ರವಲ್ಲ, ನಮ್ಮ ಮನೆ-ಮನಗಳ ಹಬ್ಬವಾಗಬೇಕು, ಅಷ್ಟೊಂದು ಸಂಭ್ರಮ ಮನೆ ಮಾಡಲು ಪ್ರತಿಯೊಬ್ಬರೂ ಕಂಕಣ ತೊಡೋಣ, ನಮ್ಮ ಇಲಾಖೆಗಳಲ್ಲಿ, ಮನೆಗಳಲ್ಲಿ ಅಮೃತಮಹೋತ್ಸವದ ಈಹಬ್ಬವನ್ನು ಅತ್ಯಂತ ಸಡಗರ,ಅದ್ದೂರಿಯಿಂದ ಆಚರಿಸೋಣ ಎಂದು ತಿಳಿಸಿದರು.

ಮಾಜಿ ಯೋಧರಿಗೆ ಸಂಘ ಅಭಿನಂದನೆ


ಜಿಲ್ಲೆಯಲ್ಲಿ ಮಾಜಿ ಯೋಧರ ಕೋಟಾದಡಿ ಸರ್ಕಾರಿ ನೌಕರರಾಗಿರುವ ಎಲ್ಲಾ ನೌಕರರನ್ನು ಗುರುತಿಸಿ ಸನ್ಮಾನಿಸಲು ಸಂಘ ನಿರ್ಧರಿಸಿದೆ ಎಂದ ಅವರು, ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಮಾಜಿ ಸೈನಿಕರನ್ನು ಗುರುತಿಸಿ ಸಂಘಕ್ಕೆ ಮಾಹಿತಿ ನೀಡಬೇಕು, ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಕೋರಿದರು.
ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ದುಡಿದಿರುವ ಮಾಜಿ ಯೋಧರನ್ನು ಗುರುತಿಸಿ ಗೌರವಿಸೋಣ, ಇದು ಮತ್ತಷ್ಟು ಮಂದಿ ಸೈನಿಕರಾಗಲು ಪ್ರೇರಣೆಯಾಗಲಿ, ಗಡಿಯಲ್ಲಿ ಅವರು ಮಾಡಿದ ಸೇವೆಗೆ ನಾವೆಲ್ಲಾ ಗೌರವ ಅರ್ಪಿಸೋಣ, ಈ ಅವಕಾಶ ನಮಗೆ ಸಿಕ್ಕಿರುವುದು ನಿಜಕ್ಕೂ ಖುಷಿ ತರುವಂತದ್ದು ಎಂದರು.

ಕಡು ಬಡ ಮಕ್ಕಳಿಗೆ ಪ್ರತಿಭಾ ಪುರಸ್ಕಾರ


ಪ್ರತಿ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ತಲಾ ಇಬ್ಬರಂತೆ ಒಟ್ಟು ನಾಲ್ಕು ಮಂದಿ ಪ್ರತಿಭಾವಂತಗ ಕಡುಬಡ ಮಕ್ಕಳನ್ನು ಗುರುತಿಸಿ ಒಟ್ಟು 24 ಮಂದಿಗೆ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲು ನಿರ್ಧರಿಸಿದ್ದು, ಈ ಆಯ್ಕೆಗಾಗಿ ಜಿಲ್ಲಾಕೇಂದ್ರದಲ್ಲಿ ಸಂಘದ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಹಾಗೂ ತಾಲ್ಲೂಕು ಹಂತದಲ್ಲಿ ತಾಲ್ಲೂಕು ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಮಕ್ಕಳ ಹೆಸರನ್ನು ಅಂತಿಮಗೊಳಿಸಿ ಆ.15ರೊಳಗೆ ಸಂಘಕ್ಕೆ ಪಟ್ಟಿ ನೀಡಲು ಸೂಚಿಸಲಾಗಿದೆ ಎಂದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಮಾತನಾಡಿ, ರಾಷ್ಟ್ರಧ್ವಜ ಹಾರೋಹಣ ಮತ್ತು ಅವರೋಹಣದ ಕುರಿತು ಮಾಹಿತಿ ನೀಡಿ, ಧ್ವಜವನ್ನು ಪ್ರತಿ ಮನೆಯ ಮೇಲೂ ಆ.13 ರಿಂದ 15 ರ ಸಂಜೆವರೆಗೂ ನಿರಂತರವಾಗಿ ಹಾರಿಸಬಹುದು ಆದರೆ ಇಲಾಖೆ,ಶಾಲೆಗಳಲ್ಲಿ ಬೆಳಗ್ಗೆ ಸೂರ್ಯೋದಯವಾದ 6 ಗಂಟೆಯಿಂದ ಸಂಜೆ ಸೂರ್ಯಾಸ್ತದ ಮುನ್ನಾ 6 ಗಂಟೆಗೆ ಕಡ್ಡಾಯವಾಗಿ ಅವರೋಹಣ ಮಾಡಬೇಕು ಎಂದು ಮಾಹಿತಿ ನೀಡಿದರು.
ಧ್ವಜವನ್ನು ಅತ್ಯಂತ ಗೌರವಯುತವಾಗಿ ಬಳಸಿ, ಯಾರಾದರೂ ಧ್ವಜಕ್ಕೆ ಅಗೌರವ ತರುವಂತೆ ಆರೋಹಣಕ್ಕೆ ಮೂಂದಾದರೆ ನೀವು ಮಾರ್ಗದರ್ಶನ ನೀಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೌಕರರ ಸಂಘದ ಖಜಾಂಚಿ ವಿಜಯ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ,ಉಪಾಧ್ಯಕ್ಷರಾದ ಪುರುಷೋತ್ತಮ್, ಎಂ.ನಾಗರಾಜ್, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್,ಪದಾಧಿಕಾರಿಗಳಾದ ವಿ.ಮುರಳಿಮೋಹನ್, ಶ್ರೀರಾಮ್, ಪಿಡಿಒ ನಾಗರಾಜ್,ನವೀನಾ, ಪ್ರೇಮಾ,ಚಂದ್ರಕಲಾ,ಎನ್.ಎಸ್.ಭಾಗ್ಯ, ನಾಗಮಣಿ, ಅನಿಲ್, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್,ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ ಸೇರಿದಂತಗೆ ಜಿಲ್ಲಾ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವೃಂದ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.