ಮನ್ವಂತರ ಪ್ರಕಾಶನದಿಂದ ಮಾಧ್ಯಮ ಕೌಶಲ್ಯ ತರಬೇತಿ ಶಿಬಿರಕ್ಕೆ ಚಾಲನೆ, ಪತ್ರಿಕಾ ವೃತ್ತಿ ಮತ್ತು ಕಲಿಕೆ ಅಂತರ ನಿವಾರಣೆಗೆ ತರಬೇತಿ ಅಗತ್ಯ -ಸದಾಶಿವಶೆಣೈ

ಕೋಲಾರ,ಆ.10: ಪತ್ರಕರ್ತರನ್ನು ರೂಪಿಸುವಲ್ಲಿ ಕಾಲೇಜಿನ ತರಗತಿಗಳು ಮತ್ತು ಸುದ್ದಿ ಮನೆಗಳ ನಡುವಿನ ಅಂತರವನ್ನು ಕೌಶಲ್ಯ ಅಭಿವೃದ್ಧಿ ತರಬೇತಿಗಳು ತುಂಬುತ್ತವೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅಭಿಪ್ರಾಯಪಟ್ಟರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಬುಧವಾರ ಮನ್ವಂತರ ಪ್ರಕಾಶನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಮಾಧ್ಯಮ ಕ್ಷೇತ್ರಕ್ಕೆ ಸೇರಲು ಆಸಕ್ತಿಯುಳ್ಳ ಯುವಕ ಯುವತಿಯರಿಗೆ ನಾಲ್ಕು ದಿನಗಳ ಉಚಿತ ಕಲಿಕೆ ಮತ್ತು ಕೌಶಲ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮರ್ಥ ಪತ್ರಕರ್ತರನ್ನು ತಯಾರು ಮಾಡುವ ಉದ್ದೇಶದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಆದರೆ, ಕೋಲಾರದ ಮನ್ವಂತರ ಪ್ರಕಾಶನ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ, ಶಿಬಿರ ಯಶಸ್ವಿಯಾಗಲಿ ಎಂದು ಆಶಿಸಿದರು.
ಕೋಲಾರ ಜಿಲ್ಲೆಗೂ ಮುಂದಿನ ದಿನಗಳಲ್ಲಿ ಅಕಾಡೆಮಿಯಿಂದ ತರಬೇತಿ ಕಾರ್ಯಕ್ರಮ ನೀಡುವುದಾಗಿ ಘೋಷಿಸಿದ ಅವರು, ಅಕಾಡೆಮಿಯು ಶೀಘ್ರದಲ್ಲಿಯೇ ಕನ್ನಡ ಪತ್ರಿಕಾ ಸಾಧಕರ ಪುಸ್ತಕಗಳನ್ನು ಹೊರತರುತ್ತಿದೆ, ಕೋಲಾರ ಜಿಲ್ಲೆಯು ಕನ್ನಡ ಪತ್ರಿಕೋದ್ಯಮಕ್ಕೆ ಉತ್ತಮ ಪತ್ರಕರ್ತರನ್ನು ಕೊಡುಗೆ ನೀಡಿದೆ ಎಂದರು.
ವರದಿಗಾರಿಕೆಗೆ ಬೇಕಾದ ಕೌಶಲ್ಯ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಉದಯವಾಣಿ ಮುಖ್ಯ ವರದಿಗಾರ ಎಸ್.ಲಕ್ಷ್ಮೀನಾರಾಯಣ ಮಾತನಾಡಿ, ಬದ್ಧತೆಯಿಂದ ತರಬೇತಿ ಪಡೆದು ಪ್ರತಿಯೊಬ್ಬ ಶಿಬಿರಾರ್ಥಿಯು ಪತ್ರಕರ್ತರಾಗಿ ಬೆಂಗಳೂರಿಗೆ ಬರುವಂತಾಗಬೇಕು, ಪತ್ರಿಕಾ ರಂಗಕ್ಕೆ ಉತ್ತಮ ಓದುಗರ ಶ್ರೀರಕ್ಷೆ ಇರುವರೆಗೂ ಸಾವಿರ ವರ್ಷಗಳ ಭವಿಷ್ಯ ಇರುತ್ತದೆ, ಯಾವುದೇ ಸಭೆ ಸಮಾರಂಭಗಳಲ್ಲಿ ಕಣ್ಣು ಮತ್ತು ಕಿವಿಯನ್ನು ತೆರೆದಿಟ್ಟುಕೊಳ್ಳುವುದೇ ಪತ್ರಕರ್ತರಿಗೆ ಇರಬೇಕಾದ ಕೌಶಲ್ಯ ಎಂದರು.
ಲೋಕಾಭಿರಾಮವಾಗಿ ಕೆಲವು ರಾಜಕಾರಣಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಗೀತಾ ಶಿವರಾಜ್‍ಕುಮಾರ್ ರಾಜಕೀಯ ಪ್ರವೇಶ ಹಾಗೂ ನಿಖಿಲ್ ಕುಮಾರಸ್ವಾಮಿಯ ಸಿನಿಮಾ ಪ್ರವೇಶ ಸುದ್ದಿಗಳನ್ನು ತಾವು ಹೇಗೆ ಒಂದೆಳೆಯಿಂದ ಗ್ರಹಿಸಿ ಮೊದಲು ಸುದ್ದಿ ನೀಡಿದವನಾದೆಯೆಂಬುದನ್ನು ವಿವರಿಸಿದರು.
ಜನಪರ ವರದಿಗಾರಿಕೆ ಸವಾಲುಗಳು ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಬದ್ರುದ್ದೀನ್ ಮಾತನಾಡಿ, ಪತ್ರಕರ್ತರಿಗೆ ಸಾಮಾನ್ಯ e್ಞÁನ ಅಗತ್ಯ, ತರಬೇತಿ ಮತ್ತು ಕೋರ್ಸು ಮತ್ತು ಕಲಿಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ನಿರಂತರ ಅಧ್ಯಯನ ಮತ್ತು ಆಸಕ್ತಿ ಇರಲಿ ಯಾರದೋ ಒತ್ತಾಯಕ್ಕೆ ಪತ್ರಕರ್ತರಾಗಬೇಡಿ ಎಂದರು.
ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ನಿಯಮಿತ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಪತ್ರಕರ್ತರಾಗಲು ಬಯಸುವವರಿಗೆ ಸಮಾಜಮುಖಿ ದೃಷ್ಟಿ, ಜನಪರ ಹೃದಯ ಮತ್ತು ಮಾನವೀಯ ಮೌಲ್ಯಗಳ ಮನಸ್ಸು ಇರಬೇಕು, ಇದಿಲ್ಲದವರು ಪತ್ರಕರ್ತರಾದರೆ ಸಮಾಜಕ್ಕೆ ಅಪಾಯಕಾರಿ, ಅಂತವರು ಭಯೋತ್ಪಾದಕರಿಗೆ ಸಮ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಶೋಕಿಗಾಗಿ ಪತ್ರಕರ್ತರಾಗದೆ ಅನುರಾಗದಿಂದ ಆಗಬೇಕು, ಪತ್ರಕರ್ತರ ಮೇಲೆ ಜನ ಆಪಾರ ವಿಶ್ವಾಸವನ್ನಿಟ್ಟುಕೊಂಡಿದ್ದಾರೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇರಬೇಕು, ಕೋಲಾರದ ಉನ್ನತ ಪತ್ರಿಕಾ ಪರಂಪರೆ ಉಳಿಸಲು ಪತ್ರಿಕಾರಂಗಕ್ಕೆ ಬನ್ನಿ, ಪತ್ರಕರ್ತ ಸಮಾಜದ ಆರೋಗ್ಯ ಕಾಪಾಡಬೇಕು, ಹೊಟ್ಟೆಪಾಡಿನ ಪತ್ರಕರ್ತರಾಗಬಾರದು, ಸ್ವಂತ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು, ಕಾಪಿ ಪೇಸ್ಟ್ ಗುತ್ತಿಗೆ ಪತ್ರಕರ್ತರಾಗಬಾರದು ಎಂದರು.
ಆಶಯ ನುಡಿಗಳನ್ನಾಡಿದ ಮನ್ವಂತರ ಪ್ರಕಾಶನದ ಪಾ.ಶ್ರೀ.ಅನಂತರಾಮ್ ಮಾತನಾಡಿ, ಕೋಲಾರ ನೆಲದಿಂದ ಜವಾಬ್ದಾರಿಯುತ ಪತ್ರಕರ್ತರನ್ನು ತಯಾರಿಸುವ ಹೊಣೆಗಾರಿಕೆಯಿಂದ ಯುವಕ ಯುವತಿಯರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ, ಇದರ ಸದುಪಯೋಗವನ್ನು ಪ್ರತಿಯೊಬ್ಬ ಶಿಬಿರಾರ್ಥಿಯು ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಸಿ.ಎಂ.ಮುನಿಯಪ್ಪ, ವಾಸುದೇವಹೊಳ್ಳ, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಎಸ್.ಕೆ.ಮಂಜುನಾಥ್, ಎ.ಜಿ.ಸುರೇಶ್‍ಕುಮಾರ್, ಅಪ್ಪಾಜಿಗೌಡ, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರಾದ ಎಂ.ಸಿ.ಮಂಜುನಾಥ್, ಎನ್.ಮುನಿವೆಂಕಟೇಗೌಡ, ಜಮ್ಮನಹಳ್ಳಿ ಕೃಷ್ಣ, ಎನ್.ತ್ಯಾಗರಾಜು, ವಿಜಯಕುಮಾರ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.
ಅರ್ಚಿತ ಪ್ರಾರ್ಥಿಸಿ, ಸಮಾಜ ಸೇವಕ ಚಂದನಗೌಡ ಸ್ವಾಗತಿಸಿ, ಟಿ.ಸುಬ್ಬರಾಮಯ್ಯ ನಿರೂಪಿಸಿ, ಎಸ್.ಕೆ.ಚಂದ್ರಶೇಖರ್ ವಂದಿಸಿದರು.