ಕೋಲಾರ; ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು ರೈತಸಂಘ ಆಗ್ರಹ

ಕೋಲಾರ; ಆ.3: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕೆಂದು ರೈತಸಂಘದಿಂದ ಉಸ್ತುವಾರಿ ಸಚಿವರ ಕಚೇರಿಯೆದುರು ಕೋಲಾರಮ್ಮನ ಕೆರೆಯ 21 ಬಿಂದಿಗೆ ನೀರನ್ನು ಜನಪ್ರತಿನಿಧಿಗಳಿಗೆ ಜಲಾಭಿಷೇಕ ಮಾಡಿ ಸರ್ಕಾರಕ್ಕೆ ತಹಸೀಲ್ದಾರ್ಮೂಲಕ ಮನವಿ ನೀಡಿ ಆಗ್ರಹಿಸಲಾಯಿತು.

ಮುಂಗಾರು ಮಳೆ ಆರ್ಭಟಕ್ಕೆ ರೈತ, ಬಡ, ಕೂಲಿ ಕಾರ್ಮಿಕರ ಬದುಕು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಸಮರ್ಪಕವಾದ ರಾಜಕಾಲುವೆಗಳ ವ್ಯವಸ್ಥೆಯಿಲ್ಲದೆ ಸುರಿಯುತ್ತಿರುವ ಮಳೆ ನೀರು ಬಡವರ ಮನೆಗೆ ನುಗ್ಗುವ ಜೊತೆಗೆ ರೈತರ ಬೆಳೆಗಳಿಗೆ ಹರಿದು ಕೋಟ್ಯಾಂತರ ರೂಪಾಯಿ ಬಂಡವಾಳಗಳು ನೀರು ಪಾಲಾಗುತ್ತಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು ದುರಾದೃಷ್ಟಕರ ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಮುಂಗಾರು ಮಳೆ ಆರಂಭವಾದಾಗ ಮಾತ್ರ ಜಿಲ್ಲೆಯ ಒತ್ತುವರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಜ್ಞಾಪಕ ಬರುತ್ತದೆ. ಮಳೆ ನೀರು ನುಗ್ಗಿ ನಷ್ಟವಾಗುವ ರಾತ್ರಿವೇಳೆಯಲ್ಲಿ ಅಧಿಕಾರಿಗಳು ಬೆಚ್ಚಗೆ ಮನೆಯಲ್ಲಿ ಕಂಬಳಿ ಹೊದ್ದು ಮಲಗಿ ತಿಂಗಳಾದರೆ ಸಂಬಳ ಪಡೆದು ಐಷಾರಾಮಿ ಜೀವನ ಮಾಡುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ತಾಕತ್ತು ಉಸ್ತುವಾರಿ ಸಚಿವರಿಗಾಗಲಿ ಜಿಲ್ಲಾಡಳಿತಕ್ಕಾಗಲಿ ಇಲ್ಲವಾಗಿದೆ.
ಒಟ್ಟಾರೆಯಾಗಿ ಕರ್ನಾಟಕದ ಭೂಪಟದಲ್ಲಿ ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಕೋಲಾರವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಜನತೆಗೆ ಮಾಡಿರುವ ದ್ರೋಹವಾಗಿದೆ ಎಂದು ಆರೋಪ ಮಾಡಿದರು. ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿ ಪಕ್ಷದ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಸೀಮಿತವಾಗಿರುವ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಅತ್ತೆ ಮನೆಗೆ ಅಳಿಯ ಬಂದ ರೀತಿ ನಡೆದುಕೊಳ್ಳುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಜನಸಾಮಾನ್ಯರ ಸುಲಿಗೆ ನಡೆಯುತ್ತಿದ್ದರೂ 6 ತಿಂಗಳಿಗೂ ವರ್ಷಕ್ಕೋ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ಮಾಡಿ ಬೀಗರ ಊಟಕ್ಕೆ ಕರೆದಂತೆ ಎಲ್ಲಾ ಅಧಿಕಾರಿಗಳನ್ನು ಕರೆದು ಭಾಷಣ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಮೇಲೆ ಇಷ್ಟವಿಲ್ಲದಿದ್ದರೆ ಸರ್ಕಾರ
ಕೂಡಲೇ ಬೇರೆ ಉಸ್ತುವಾರಿ ಸಚಿವರನ್ನು ನೇಮ ಮಾಡಿ, ಹಾಲಿ ಸಚಿವರನ್ನು ಬದಲಾವಣೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ ಎಂದು ಆಗ್ರಹಿಸಿದರು.
ಟೊಮೇಟೊ ಬೆಳೆಗಾರರು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಜೊತೆಗೆ 5 ವರ್ಷದಿಂದ ಸತತವಾಗಿ ಅಂಗಮಾರಿ, ರೋಸ್ ಮತ್ತಿತರ
ರೋಗಗಳಿಂದ ತತ್ತರಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿರುವ ಔಷಧಿಗಳಿಂದ ನಿಯಂತ್ರಣಕ್ಕೆ ಬಾರದೆ ಸಾಲದ ಸುಳಿಗೆ ಸಿಲುಕಿರುವ ರೈತನ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕಾದ ಉಸ್ತುವಾರಿ ಸಚಿವರ ಕಣ್ಣಿಗೆ ಹೊಸಕೋಟೆಯಿಂದ ನಂಗಲಿವರೆಗೂ ರಸ್ತೆಯಲ್ಲಿ ಸುರಿದಿರುವ ಟೊಮೇಟೊ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು. 24 ಗಂಟೆಯಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳ ಜೊತೆಗೆ ರೈತರು, ರೈತ ಸಂಘಟನೆಗಳ ಸಭೆ ಕರೆದು ಬಗೆಹರಿಸದೇ ಇದ್ದರೆ ಆಗಸ್ಟ್ 14ರ ಮಧ್ಯರಾತ್ರಿ ಸ್ವಾತಂತ್ರ್ಯ ದಿನಾಚರಣೆಯಂದು ನಷ್ಟವಾಗಿರುವ ಟೊಮೇಟೊ ಸಮೇತ ಬಸ್ ನಿಲ್ದಾಣ ವೃತ್ತದಲ್ಲಿ ಕಳೆದುಹೋಗಿರುವ ಸ್ವಾತಂತ್ರ್ಯವನ್ನು ಹುಡುಕಿಕೊಡುವಂತೆ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಅವರು, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು. ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,
ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ತೆರ್ನಹಳ್ಳಿ ಆಂಜಿನಪ್ಪ, ಮಂಗಸಂದ್ರ ತಿಮ್ಮಣ್ಣ, ನಾರಾಯಣಗೌಡ, ವೆಂಕಟೇಶಪ್ಪ, ಕುವ್ವಣ್ಣ, ಗೋವಿಂದಪ್ಪ, ಹರೀಶ್, ಕೋಟೆ ಶ್ರೀನಿವಾಸ್, ಕುಡುವನಹಳ್ಳಿ ಸುರೇಶ್, ಮರಗಲ್ ಮುನಿಯಪ್ಪ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಸುರೇಶ್‍ಬಾಬು, ಫಾರೂಖ್ ಪಾಷ,ಬಂಗಾರಿ ಮಂಜು, ಯಲುವಳ್ಳಿ ಪ್ರಭಾಕರ್ , ಚಂದ್ರಪ್ಪ, ಶೈಲ, ಭಾಗ್ಯ, ರತ್ನಮ್ಮ ಮುಂತಾದವರಿದ್ದರು.