ಕುಂದಾಪುರ : ಶ್ರೀ ಕೃಷ್ಣನ ಪ್ರತಿಯೊಂದು ನಡೆಯೂ ನಮ್ಮ ಜೀವನಕ್ಕೆ ಆದರ್ಶ. ಅವನ ಬಾಲಲೀಲೆ, ಭ್ರಾತೃ ಪ್ರೇಮ, ಮುತ್ಸದ್ದಿತನ, ಗೀತಾಬೋಧನೆ ಎಲ್ಲವುಗಳಲ್ಲೂ ಜೀವನ ಸಂದೇಶವಿದೆ. ಅಂತಹವುಗಳನ್ನು ಪ್ರಕಟಪಡಿಸುವ, ಜನಜೀವನಕ್ಕೆ ಮಾದರಿಯಾಗಬಲ್ಲ ಕಾರ್ಯಕ್ರಮಗಳನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹಮ್ಮಿಕೊಳ್ಳಬೇಕು ಎಂದು ಕೋಟೇಶ್ವರ ಮಿತ್ರದಳ ದ ಅಧ್ಯಕ್ಷ ಗೋಪಾಲಕೃಷ್ಣ ಹತ್ವಾರ್ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ರೂಪುರೇಷೆಗಳನ್ನು ನಿರ್ಧರಿಸಲು ಬುಧವಾರದಂದು ಕೋಟೇಶ್ವರದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಿತ್ರದಳ ಕೋಟೇಶ್ವರ ವಲಯದ ಆಶ್ರಯದಲ್ಲಿ ಪ್ರತಿ ವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವೈಭವದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಿರಿ – ಕಿರಿಯರಿಗೆ ವೈವಿಧ್ಯಮಯ ಸ್ಪರ್ಧೆಗಳು, ಸಹಾಯಧನ ವಿತರಣೆ, ಶ್ರೀ ಕೃಷ್ಣನ ಕುರಿತು ಸಂದೇಶ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ.
ನೆರೆದ ಸಭಿಕರು ಸ್ಪರ್ಧೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಮಿತ್ರದಳದ ಉಪಾಧ್ಯಕ್ಷ ಕೃಷ್ಣಾನಂದ ಪೈ, ಕಾರ್ಯದರ್ಶಿ ಚಿದಂಬರ ಉಡುಪ, ಜೊತೆ ಕಾರ್ಯದರ್ಶಿ ನರಸಿಂಹ ಮೂರ್ತಿ ಬುಧ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮಚಂದ್ರ ವರ್ಣ, ಸೀತಾರಾಮ ಧನ್ಯ, ವೈ. ಎನ್. ವೆಂಕಟೇಶಮೂರ್ತಿ ಭಟ್, ಗಣಪಯ್ಯ ಚಡಗ, ಕೆ. ಜಿ. ವೈದ್ಯ ಹಾಗೂ ವಾದಿರಾಜ ಅಡಿಗ, ಸತ್ಯನಾರಾಯಣ ಅರಸ್, ನಾಗೇಂದ್ರ ಬಿಳಿಯ, ಭಾಗ್ಯಲಕ್ಷ್ಮೀ ಧನ್ಯ, ಅರುಂಧತಿ ವೈದ್ಯ ಮೊದಲಾದವರು ಸಲಹೆಗಳನ್ನು ನೀಡಿದರು.
ಲಕ್ಷ್ಮೀನಾರಾಯಣ ಭಟ್ಟ ಸಭಾಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಧನ್ಯ ಸ್ವಾಗತಿಸಿ, ಕೃಷ್ಣಾನಂದ ಪೈ ವಂದಿಸಿದರು. ಆಗಸ್ಟ್ 15 ರ ಸೋಮವಾರ ಮಧ್ಯಾನ್ಹ 2 ಗಂಟೆಯಿಂದ ಕೋಟೇಶ್ವರ ರಥಬೀದಿಯಲ್ಲಿನ ಶ್ರೀ ವಾದಿರಾಜ ಕಲ್ಯಾಣ ಮಂಟಪದಲ್ಲಿ ಸ್ಪರ್ಧೆಗಳು ನಡೆಯಲಿವೆ.