ಕೋಲಾರ: ಜು.23: ಪಿ ನಂಬರ್, ಕೆರೆ ಒತ್ತುವರಿ ತೆರೆವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಗ್ರಾಮೀಣ ಸೇವೆ ಮಾಡದೆ ನಾಪತ್ತೆಯಾಗಿರುವ ಕಂದಾಯ ಅಧಿಕಾರಿಗಳನ್ನು ಹುಡುಕಿಕೊಡಬೇಕೆಂದು ರೈತ ಸಂಘದಿಂದ ತಹಶೀಲ್ದಾರ್ ನಾಗರಾಜ್ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರ ಭೂ ರಹಿತ ಬಡವರಿಗೆ ನಮೂನೆ 50,53,57 ರ ಪ್ರಕಾರ ದರಕಾಸ್ತ್ ಕಮಿಟಿ ಮೂಲಕ ನ್ಯಾಯಯುತವಾಗಿ ಮಂಜೂರಾಗಿರುವ ಸಾಗುವಳಿ ಚೀಟಿ ಪಡೆದಿರುವ ರೈತರಿಗೆ ತಲೆನೋವಾಗಿರುವ ಪಿ.ನಂಬರ್ ದುರಸ್ತಿ ಮಾಡಲು ಲಕ್ಷ ಲಕ್ಷ ಲಂಚ ನೀಡಿ ದಲ್ಲಾಳಿಗಳ ಮುಖಾಂತರ ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ನೆರವಾಗಿ ರೈತರು ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ನೂರೊಂದು ನೆಪ ಹೇಳಿ ವರ್ಷಾನುಟ್ಟಲೇ ಇಲಾಖೆಗೆ ಅಲೆದಾಡಿಸುತ್ತಾರೆಂದು ಅವ್ಯವಸ್ಥೆಯ ಬಗ್ಗೆ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ತಹಶೀಲ್ದಾರ್ ರವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಕೆಲಸ ದೇವರ ಕೆಲಸ ತಾಲ್ಲೂಕು ಕಚೇರಿಯಲ್ಲಿ ಕೆಲವು ಕಂದಾಯ ಅಧಿಕಾರಿಗಳ ಕೆಲಸ ರಿಯಲ್ ಎಸ್ಟೇಟ್ ಕೆಲಸವಾಗಿದೆ. ಪ್ರತಿವಾರ ಶಾಸಕರು ರೈತರ ಕುಂದು ಕೊರತೆ ಸಭೆ ಪ್ರಚಾgದ ಸಭೆಯಾಗಿ ಯಾವುದೇ ಸಮಸ್ಯೆ ಬಗೆಹರಿಸದ ಅಧಿಕಾರಿ ವರ್ಗದ ಮೇಲೆ ಕ್ರಮ ಕೈಗೊಳ್ಳದೇ ದಾಖಲೆಗಳಿಗಾಗಿ ಬಡ ರೈತರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸುವ ಜೊತೆಗೆ ದಾರಿಗಾಗಿ ಕುಟುಂಬ ಸಮೇತ ಇಲಾಖೆಯ ಮುಂದೆ ಹೋರಾಟ ಮಾಡುವ ಮಟ್ಟಕ್ಕೆ ಹದಗೆಟ್ಟಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸರ್ಕಾರದ ಸಂಬಂಳ ಪಡೆದು ಗ್ರಾಮೀಣ ಸೇವೆ ಮಾಡಬೇಕಾದ ಕಂದಾಯ ಅಧಿಕಾರಿಗಳು ನಗರಕ್ಕೆ ಹೊಂದಿಕೊಂಡು ಜನಸಾಮಾನ್ಯರ ಕೆಲಸಕ್ಕೆ ದಲ್ಲಾಳರನ್ನು ಅವಲಂಭಿಸಬೇಕಾದ ಪರಿಸ್ಥಿತಿ ಇದೆ ಎಂದು ಆರೋಪ ಮಾಡಿದರು.
ಕೆರೆ ರಾಜಕಾಲುವೆ ಒತ್ತುವರಿ ತೆರೆವುಗೊಳಿಸಬೇಕಾದ ಆಯಾ ಹೋಬಳಿಯ ಆರ್.ಐ ವಿ.ಎಗಳೇ ಸರ್ಕಾರಿ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಠಿ ಮಾಡಿ ಮಾರಾಟ ಮಾಡುವ ದಂದೆಯಲ್ಲಿ ತೊಡಗಿದ್ದಾರೆ. ಒತ್ತುವರಿ ದಾಖಲೆಗಳ ಸಮೇತ ದೂರು ನೀಡಿದರು ಒತ್ತುವರಿ ಆಗಿಲ್ಲ ಎಂದು ವರದಿ ಕೊಡುವ ಅಧಿಕಾರಿಗಳನ್ನು ಮಾನ್ಯ ದಂಡಾಧಿಕಾರಿಗಳು ಅಮಾನತು ಮಾಡಿ ಸರ್ಕಾರಿ ಆಸ್ತಿಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನಾದ್ಯಾಂತ ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ರಾಜಕೀಯ ಒತ್ತಡ ಇರುವ ಒಬ್ಬರಿಗೆ 2-3 ಹೋಬಳಿ ಜವಬ್ದಾರಿ ನೀಡುವುದರಿಂದ ಅಧಿಕಾರಿಗಳ ಮೇಲೆ ಕೆಲಸದ ಒತ್ತಡದ ಜೊತೆಗೆ ಆರೋಗ್ಯ ಹದಗೆಟ್ಟು ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವಂತಾಗುತ್ತದೆ. ಮಾನ್ಯರು ಸರ್ಕಾರಕ್ಕೆ ವರದಿ ನೀಡಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮುಖಾಂತರ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ನಾಗರಾಜ್ ತಾಲ್ಲೂಕು ಕಚೇರಿಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ, ದಲ್ಲಾಳಿಗಳಿಗೆ ಕಡಿವಾಣ ಹಾಕುವ ಜೊತೆಗೆ ಪಿ ನಂಬರ್ ,ಕೆರೆ ರಾಜಕಾಲುವೆ ಒತ್ತುವರಿ ತೆರೆವುಗೊಳಿಸಲು ಹೆಚ್ಚಿನ ಆಧ್ಯತೆ ನೀಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೋಲಾರ ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲ್ಲೂಕಾದ್ಯಕ್ಷ ಯಲ್ಲಪ್ಪ, ಮರಗಲ್ ಮುನಿಯಪ್ಪ, ಮುದುವಾಡಿ ಚಂದ್ರಪ್ಪ, ನಳಿನಿ.ವಿ, ಮುಂತಾದವರಿದ್ದರು.