ರೈತ ಸಂಘದ ತಾಲ್ಲೂಕು ಘಟಕದ ಜಾರ್ಯಕರ್ತರು ರಾಜ್ಯದ ರೈತರ ಭೂಮಿ ಹಕ್ಕಿಗಾಗಿ ಪ್ರತಿಭಟನೆ ನಡೆಸಿದರು

ಶ್ರೀನಿವಾಸಪುರ: ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಜಾರ್ಯಕರ್ತರು ರಾಜ್ಯದ ರೈತರ ಭೂಮಿ ಹಕ್ಕಿಗಾಗಿ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಅರ್ಜಿ ಸಲ್ಲಿಸಿರುವ ಎಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರ ಹಕ್ಕುಪತ್ರ ನೀಡಬೇಕು. ವಿತರಣೆಯಲ್ಲಿ ಆಗುವ ಭ್ರಷ್ಟಾಚಾರ ತಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಜಮೀನು ಸಾಗುವಳಿ ಮಾಡುವ ರೈತರಿಗೆ ಹಕ್ಕುಪತ್ರ ನೀಡುವ ಬದಲು ಗುತ್ತಿಗೆ ನೀಡುವ ಕ್ರಮವನ್ನು ಹಿಂಪಡೆಯಬೇಕು. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ ತಿದ್ದುಪಡಿ ತರಬೇಕು. 2005 ರ ಪೂರ್ವದಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೆ ಹಕ್ಕುಪತ್ರ ವಿತರಿಸಬೇಕು. ಕೈಗಾರಿಕಾ ಕಾರಿಡಾರ್ ಹೆಸರಲ್ಲಿ ರೈತರ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ರೈತ ವಿರೋಧಿ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಇರುವ ನಿವೇಶನ ರಹಿತರನ್ನು ಗುರುತಿಸಿ ಉಚಿತ ಹಿತ್ತಲು, ನಿವೇಶನ ಸಹಿತ ಮನೆ ನಿರ್ಮಿಸಿ ಕೊಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಭೂರಹಿತರು ಹಾಗೂ ದೇವದಾಸಿಯರಿಗೆ ತಲಾ ಐದು ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಶಿರಸ್ತೇದಾರ್ ಮನೋಹರ ಮಾನೆ ಅವರಿಗೆ ನೀಡಲಾಯಿತು.
ಮುಖಂಡರಾದ ಆರ್.ವೆಂಕಟೇಶ್, ಎಸ್.ಎಂ.ನಾಗರಾಜ್, ವೆಂಕಟಮ್ಮ, ಜಿ.ಮಂಜುಳ, ನೇತ್ರಾವತಿ, ಶಿವಪ್ಪ, ಎಂ.ವಿ.ವಿಶ್ವನಾಥ್, ಶಿವಾರೆಡ್ಡಿ ಇದ್ದರು.