ವಿಕಲಚೇತನರು ನ್ಯೂನ್ಯತೆಗಳ ಬಗ್ಗೆ ಆಲೋಚಿಸುವ ಬದಲು, ಅದನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಗುರಿ ಸಾಧಿಸಬೇಕು: ಮುದ್ದಣ್ಣ

ಕೋಲಾರ, ಜು.18: ವಿಕಲಚೇತನರು ತಮ್ಮಲ್ಲಿನ ನ್ಯೂನ್ಯತೆಗಳ ಬಗ್ಗೆ ಆಲೋಚಿಸುವ ಬದಲು, ಅದನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ ಹೇಳಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ವಿಕಲಚೇತನ ಶಿಬಿರಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತರಬೇತಿಯ ಬೀಳ್ಕೂಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮಲ್ಲಿ ಎಂತಹ ಸಮಸ್ಯೆ ಇದ್ದರು ಅದನ್ನು ಋಣಾತ್ಮಕವಾಗಿ ಪರಿಗಣಿಸಬಾರದು, ಬದಲಾಗಿ ಧನಾತ್ಮಕವಾಗಿ ಆಲೋಚಿಸುವ ಮನಸ್ಸಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಸಾಧಿಸುವ ಛಲ ಇರುವವರಿಗೆ ವಿಕಲತೆ ಅಡ್ಡಿಬರಲಾರದು ಎಂದರು. ಸ್ವ ಉದ್ಯೋಗ ಆರಂಭಿಸಿ, ನಾವು ಒಂದಿಬ್ಬರಿಗಾದರೂ ಕೆಲಸ ನೀಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.
ನಾಗರಿಕ ಸೇವಾ ವಲಯ, ವಿಜ್ಞಾನ, ಸಾಹಿತ್ಯ, ಚಿತ್ರರಂಗ, ಕ್ರೀಡೆ, ಮಾಧ್ಯಮ, ಶಿಕ್ಷಣ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ವಿಕಲಚೇತನರು ಅಪ್ರತಿಮ ಸಾಧನೆ ಮಾಡಿದ್ದಾರೆ. ನಮ್ಮಲ್ಲಿನ ಆತ್ಮವಿಶ್ವಾಸವೇ ನಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ. ಎಂತಹ ಸನ್ನಿವೇಶಗಳು ಬಂದರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮುನಿರಾಜಪ್ಪ ಮಾತನಾಡಿ, ಕೆಲ ವಿಕಲಚೇತನರ ಉತ್ಸಾಹ, ಹುಮ್ಮಸ್ಸು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ. ಅಷ್ಟರ ಮಟ್ಟಿಗೆ ಹಲವು ಸಮಸ್ಯೆಗಳಿದ್ದರೂ, ಜೀವನ ಉತ್ಸಾಹ ಮಾತ್ರ ಕಳೆದುಕೊಂಡಿರುವುದಿಲ್ಲ ಎಂದರು.
ವಿಕಲತೆ ಮೆಟ್ಟಿ ನಿಲ್ಲುವ ಮನಸ್ಥಿತಿ ಹೊಂದಿದರೆ, ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲು ಸುಲಭವಾಗುತ್ತದೆ. ದೈಹಿಕ ನ್ಯೂನ್ಯತೆಗಳು ಇದ್ದರು ಚಿಂತೆ ಪಡುವ ಅವಶ್ಯಕತೆ ಇಲ್ಲ. ಆದರೆ ನಿರ್ಲಕ್ಯ್ಷತನ, ಸೋಮಾರಿತನದ ಮನಸ್ಥಿತಿ ಇರಬಾರದು ಎಂದು ಹೇಳಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಬಾಲಾಜಿ.ಎಂ ಮಾತನಾಡಿ, ವಿಕಲಚೇತನರು ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಸ್ವ ಉದ್ಯೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಿಬಿರಾರ್ಥಿಗಳಿಗೆ ಉದ್ಯಮಶೀಲತೆ ತರಬೇತಿಯನ್ನು ನೀಡಲಾಗಿದೆ ಎಂದರು.
ಇದೇ ವೇಳೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಸಾರ್ಕ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಮೇಘರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.