ಓಟಿಗಾಗಿ ನೋಟು ಸಂಸ್ಕøತಿ ವಿರುದ್ದ ಮಹಿಳೆಯರು ಸಿಡಿದೆದ್ದರೆ ಮಾತ್ರ -ದೇಶ,ಸಮಾಜ ಉಳಿಯಲು ಸಾಧ್ಯ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಓಟಿಗಾಗಿ ನೋಟು ನೀಡುವ ಸಂಸ್ಕøತಿ ವಿರುದ್ದ ಮಹಿಳೆಯರು ಸಿಡಿದು ಧ್ವನಿಯೆತ್ತಿದರೆ ಮಾತ್ರ ಸಮಾಜ ಹಾಗೂ ದೇಶ ಉಳಿಯಲು ಸಾಧ್ಯ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ 29 ಮಹಿಳಾ ಹಾಗೂ ಒಂದು ಪುರುಷ ಸ್ವಸಹಾಯ ಸಂಘಗಳಿಗೆ 1.50 ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಮತವನ್ನು ಮಾರಿಕೊಳ್ಳುವ ಅನಿಷ್ಠ ಪದ್ದತಿ ಕೊನೆಗೊಳಿಸಲು ಮಹಿಳೆಯರಿಂದ ಮಾತ್ರ ಸಾಧ್ಯ ಎಂದ ಅವರು, ಇದರ ವಿರುದ್ದ ಪ್ರತಿಯೊಬ್ಬರೂ ಧ್ವನಿಯೆತ್ತಿದಾಗ ಉತ್ತಮ ಜನನಾಯಕರು, ಸದೃಢ ಜನಪರ ಸರ್ಕಾರ ಉದಯಿಸಲು ಸಾಧ್ಯ ಎಂದು ತಿಳಿಸಿ, ಮತದಾನದ ಹಕ್ಕನ್ನು ಯಾರಿಗೂ ಅಡವಿಡದಿರಿ ಎಂದರು.
ಡಿಸಿಸಿ ಬ್ಯಾಂಕ್ ಮೂಲಕ ಪ್ರತಿ ಮಹಿಳೆಗೂ ತಲಾ 2 ಲಕ್ಷ ಸಾಲ ನೀಡುವ ಅಧಿಕಾರ ನಬಾರ್ಡ್ ನೀಡಿದೆ, ಒಂದು ಸಂಘಕ್ಕೆ 20 ಲಕ್ಷ ಸಾಲ ನೀಡಲು ನಾವು ಸಿದ್ದರಿದ್ದೇವೆ ಎಂದ ಅವರು, ಸಾಲ
ಮರುಪಾವತಿಯಲ್ಲಿ ಉತ್ತಮ ಮೇಲ್ಪಂಕ್ತಿ ಹಾಕಿಕೊಂಡಿರುವ ಮಹಿಳಾ ಸಂಘಗಳಿಗೆ ಈ ಸೌಲಭ್ಯ ನೀಡುತ್ತೇವೆ ಎಂದರು.
ಅವಿಭಜಿತ ಜಿಲ್ಲೆಯ ಹೆಣ್ಣು ಮಕ್ಕಳ ಕಷ್ಟಕ್ಕೆ ಡಿಸಿಸಿ ಬ್ಯಾಂಕ್ ಸ್ಪಂದಿಸಿದೆ, ಯಾವುದೇ ಮಧ್ಯವರ್ತಿಗಳ ಹಾವಳಿ,ಭ್ರಷ್ಟತೆಗೆ ಅವಕಾಶವಿಲ್ಲದಂತೆ ಸಾಲ ವಿತರಿಸುವ ಆತ್ಮತೃಪ್ತಿ ತಮಗಿದೆ ಎಂದ ಅವರು, ಮಹಿಳೆಯರು ಉಳಿತಾಯದ ಹಣವನ್ನು ನಿಮ್ಮ ನೆರವಿಗೆ ನಿಂತಿರುವ ಡಿಸಿಸಿ ಬ್ಯಾಂಕಿನಲ್ಲೇ ಇಡಿ, ಇತರೆಲ್ಲಾ ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿಯೂ ನೀಡುತ್ತೇವೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಕಳೆದ 8 ವರ್ಷಗಳ ಹಿಂದೆ ಬ್ಯಾಂಕ್ ದಿವಾಳಿಯಾಗಿತ್ತು. ಆದರೆ ಇಂದು ಎರಡೂ ಜಿಲ್ಲೆಗಳ 7 ಲಕ್ಷ ಮಹಿಳೆಯರಿಗೆ 800 ಕೋಟಿಗೂ ಅಧಿಕ ಸಾಲ ನೀಡುವ ಮೂಲಕ ಇಡೀ ದೇಶದಲ್ಲೇ ಅತಿ ಹೆಚ್ಚು ತಾಯಂದಿರಿಗೆ ಸಾಲ ನೀಡಿದ ಹೆಗ್ಗಳಿಕೆ ಡಿಸಿಸಿ ಬ್ಯಾಂಕ್ ಹೊಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಯಾಂಕ್ ಉಳಿಸಿರೋದು ಇಂದು ಮಹಿಳೆಯರೇ ಎಂದ ಅವರು, ನೀವು ಉಳಿತಾಯ ಮಾಡಿರುವ 300 ಕೋಟಿ ಹಣ ಬ್ಯಾಂಕಿನಲ್ಲಿ ಠೇವಣಿ ಇದೆ, ಇದು ನಿಮ್ಮದೇ ಬ್ಯಾಂಕ್ ಆಗಿದ್ದು, ಪ್ರತಿ ಕುಟುಂಬಕ್ಕೂ ಸಾಲ ತಲುಪಿಸುವ ಸಂಕಲ್ಪ ನಮ್ಮದಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಮಹಿಳೆಯರು ಯಾರ ಬಳಿಯೂ ಹಣಕ್ಕಾಗಿ ಕೈಚಾಚಬಾರದು, ನಿಮ್ಮ ಸ್ವಾವಲಂಬಿ ಬದುಕಿಗೆ ಬ್ಯಾಂಕ್ ನೀಡುವ ಸಾಲವನ್ನು ಆಧಾರವಾಗಿಸಿಕೊಳ್ಳಿ, ಸ್ವಯಂ ಉದ್ಯೋಗ ಪ್ರಾರಂಭಿಸಿ, ನಿಮ್ಮ ಕುಟುಂಬಗಳ ಪೋಷಣೆ ಜತೆಗೆ ಸಮಾಜಕ್ಕೂ ಮಾದರಿಯಾಗಿ, ಅಗತ್ಯಕ್ಕೆ ತಕ್ಕಂತೆ ಸಾಲದ ಹಣ ಬಳಸಿಕೊಳ್ಳಿ, ಎಟಿಎಂ ಮೂಲಕವೇ ಡ್ರಾ ಮಾಡಿಕೊಳ್ಳಿ, ದುರುಪಯೋಗ ಬೇಡ, ನೀವು ಮತ್ತಷ್ಟು ಮಹಿಳಾ ಸಂಘಗಳಿಗೆ ಪ್ರೇರಣೆಯಾಗಿ ಎಂದರು.
ಕೋಲಾರ,ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಡಿಸಿಸಿ ಬ್ಯಾಂಕ್ ನೀಡುವ ಸಾಲಕ್ಕೆ ಮಹತ್ವವಿದೆ, ಭದ್ರತೆ, ಶಿಫಾರಸ್ಸುಗಳು ಇಲ್ಲದೇ ಯಾವುದೇ ವಾಣಿಜ್ಯ ಬ್ಯಾಂಕ್ ನಿಮಗೆ ಸಾಲ ನೀಡುವುದಿಲ್ಲ, ಡಿಸಿಸಿ ಬ್ಯಾಂಕ್ ನಿಮ್ಮನ್ನು ಕೂರಿಸಿ ತಾಂಬೂಲದೊಂದಿಗೆ ಗೌರವದಿಂದ ಸಾಲ ನೀಡುತ್ತಿದೆ, ಈ ಸಾಲ ನಿಮ್ಮ ಕುಟುಂಬಗಳಿಗೆ ಬೆಳಕಾಗಲಿ, ನಿಮ್ಮ ಬದುಕು ಹಸನು ಮಾಡಿಕೊಳ್ಳಬೇಕು ಎಂಬುದೇ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರ ಸಂಕಲ್ಪವೂ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಕೋಲಾರ ಶಾಖೆಯ ಅಮೀನಾ, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದು, ತಾಲ್ಲೂಕಿನ 30 ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಾಲದ ಚೆಕ್ ವಿತರಿಸಲಾಯಿತು.