ಅಪರಾಧ ತಡೆಯಲು ಗಡಿ ಹಂಚಿಕೊಂಡಿರುವ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಾಂಘಿಕ ಪ್ರಯತ್ನ ಮಾಡಬೇಕು:ಡಿ.ದೇವರಾಜ್

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ಅಪರಾಧ ತಡೆಯಲು ಗಡಿ ಹಂಚಿಕೊಂಡಿರುವ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಾಂಘಿಕ ಪ್ರಯತ್ನ ಮಾಡಬೇಕುಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳಿದರು.


ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ ರಾಜ್ಯ ಪೊಲೀಸ್ ಅಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ರಾಜ್ಯದಲ್ಲಿ ಅಪರಾಧ ಮಾಡಿ, ಇನ್ನೊಂದು ರಾಜ್ಯದಲ್ಲಿ ತಲೆ ಮರೆಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಅಪರಾಧಿಗಳ ಪತ್ತೆಗೆ ಸಮಯ ಹಿಡಿಸುತ್ತಿದೆ. ಬೇರೆ ಬೇರೆ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಅಪರಾಧಿಗಳ ಪತ್ತೆ ಸುಲಭವಾಗುತ್ತದೆ ಎಂದು ಹೇಳಿದರು.
ಬದಲಾದ ಪರಿಸ್ಥಿತಿಯಲ್ಲಿ ಅಪರಾಧಗಳನ್ನು ತಡೆಯಲು ಹಾಗೂ ಅಪರಾಧಿಗಳನ್ನು ಹಿಡಿಯಲು ಪರಸ್ಪರ ಸಹಕಾರ ಹಾಗೂ ಮಾಹಿತಿ ವಿನಿಮಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಹೊಣೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಸೇರಿದೆ ಎಂದು ಹೇಳಿದರು.


ಗಡಿ ಹಂಚಿಕೊಂಡಿರುವ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳು ನಾಡು ಪೊಲೀಸರು ಅಕ್ರಮ ಗೋಸಾಗಾಣಿಕೆ, ಗೋವುಗಳ ಕಳ್ಳತನ, ಎನ್‍ಡಿಪಿಎಸ್ ಪ್ರಕರಣಗಳು, ರಕ್ತಚಂದನ ಕಳ್ಳಸಾಗಾಣಿಕೆ ಪ್ರಕರಣಗಳು, ಅಬಕಾರಿ ಕಾಯ್ದೆ ಪ್ರಕರಣಗಳು, ಪತ್ತೆಯಾಗುವ ಅಪರಿಚಿತ ಮೃತ ದೇಹಗಳು, ಬಾಕಿ ಇರುವ ವಾರಂಟ್ ಆಸಾಮಿಗಳು, ಘೋರ ಅಪರಾಧ ಪ್ರಕರಣಗಳು ಹಾಗೂ ಆರೋಪಿಗಳು, ಅಂತರ ರಾಜ್ಯ ಗ್ಯಾಂಗ್‍ಗಳು, ಪತ್ತೆಯಾಗದ ವ್ಯಕ್ತಿಗಳು ಮುಂತಾದ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದರು.


ಸಭೆಯಲ್ಲಿ ಅಂತರ ರಾಜ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಅಪರಾಧಗಳನ್ನು ತಡೆಯುವ ಹಾಗು ಅಪರಾಧಿಗಳನ್ನು ಹಿಡಿಯುವ ಬಗ್ಗೆ ಚರ್ಚಿಸಲಾಯಿತು. ಕೊಲಾರ, ಚಿಕ್ಕಬಳ್ಳಾಪುರ, ಕೆಜಿಎಫ್, ಆಂಧ್ರಪ್ರದೇಶದ ಚಿತ್ತೂರು, ಅನ್ನಮಯ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.


ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಚಿನ್ ಘೋರ್ಪಡೆ, ಆಂಧ್ರಪ್ರದೇಶದ ಮದನಪಲ್ಲಿ ಡಿವೈಎಸ್‍ಪಿ ರವಿಮೋಹನಾಚಾರಿ, ಪಲಮನೇರು ಡಿವೈಎಸ್‍ಪಿ ಗಂಗಯ್ಯ, ಮದನಪಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಮುರಳಿಕೃಷ್ಣ, ಸತ್ಯನಾರಾಯಣ, ಗಂಗುವರಂ ಸರ್ಕಲ್ ಇನ್ಸ್‍ಪೆಕ್ಟರ್, ಅಶೋಕ್ ಕುಮಾರ್, ಕುಪ್ಪಂ ಸರ್ಕಲ್ ಇನ್ಸ್‍ಪೆಕ್ಟರ್ ಮನೋಹರರಾವ್, ವಿಕೋಟ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಸಾದ್ ಬಾಬು, ಕಿತ್ತೂರು ಸರ್ಕಲ್ ಇನ್ಸ್‍ಪೆಕ್ಟರ್ ಶರತ್ ಚಂದ್ರ, ರಾಮಸಮುದ್ರಂ ಸಬ್ ಇನ್ಸ್‍ಪೆಕ್ಟರ್ ರವೀದ್ರ, ಕೋಲಾರ ಡಿವೈಎಸ್‍ಪಿಗಳಾದ ರಮೇಶ್, ಜಯಶಂಕರ್, ಶ್ರೀನಿವಾಸಪುರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಸಿ.ಜಿ.ನಾರಾಯಣಸ್ವಾಮಿ, ಗೌನಿಪಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮುನಿರತ್ನಂ, ರಾಯಲ್ಪಾಡ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ಇದ್ದರು.