JANANUDI NEWS NETWORK (EDITOR : BERNARD D’COSTA)
“ಒಳ್ಳೆಯವರಾಗುವುದು” ನಮ್ಮ ಬದುಕಿನ ಧ್ಯೇಯದಲ್ಲಿ ಒಂದಾಗಿರಬೇಕು. ಮಾನವೀಯತೆಯ ಸ್ಪರ್ಶ ಇರುವ ಸೇವೆ ಬಹಳ ಉತ್ತಮ ಪರಿಣಾಮ ಸಮಾಜದಲ್ಲಿ ಉಂಟು ಮಾಡುತ್ತದೆ. ಜನ ಜೀವನದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡುತ್ತಿರುವ ರೋಟರಿ ಸದಸ್ಯರಾಗುವುದರೊಂದಿಗೆ ವೃತ್ತಿಯಲ್ಲೂ ಶೃದ್ಧೆ, ಕರ್ತವ್ಯ, ನಿಷ್ಠೆ ತೋರುತ್ತಿರುವ ರೋಟರಿ ಸದಸ್ಯರು ಅಭಿನಂದನೀಯರು. ರೋಟರಿ ಕುಂದಾಪುರ ದಕ್ಷಿಣ ಈ ನಿಟ್ಟಿನಲ್ಲಿ ಬಹಳ ಶ್ರೇಷ್ಠ ಸಾಧನೆ ಮಾಡುತ್ತಾ ಬಂದಿದೆ. ಕಳೆದ ವರ್ಷ ಅಸಹಾಯಕರಿಗೆ ಸುಸಜ್ಜಿತ ಮನೆಗಳನ್ನು ಕಟ್ಟಿ ಕೊಟ್ಟು, ಬಸ್ ತಂಗುದಾಣವನ್ನು ನಿರ್ಮಿಸಿದ್ದಲ್ಲದೆ ಹತ್ತಾರು ಆರೋಗ್ಯಪೂರ್ಣ ಸೇವೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷರು ಅದೇ ಪರಂಪರೆಯಲ್ಲಿ ಮುನ್ನಡೆಯಲಿ ಎಂದು ಖ್ಯಾತ ಜಾದುಗಾರ, ಸಾಹಿತಿ, ವಾಗ್ಮಿ ಓಂ ಗಣೇಶ್ ಉಪ್ಪುಂದ ಹೇಳಿದರು.
ಕುಂದಾಪುರ ಸ.ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ರೋಟರಿ ಕುಂದಾಪುರ ದಕ್ಷಿಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
“ನಾವು ಸಚ್ಚಾರಿತ್ರ್ಯವಂತರಾಗೋಣ, ಅದು ನಮ್ಮ ಹೆಗ್ಗುರುತು ಆಗಲಿ” ಎಂದು ಓಂ ಗಣೇಶ್ ಆಶಯ ವ್ಯಕ್ತಪಡಿಸಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಮಹೇಂದ್ರ ಶೆಟ್ಟಿ, ನೂತನ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕರಿಗೆ ಅಧಿಕಾರ ಹಸ್ತಾಂತರಿಸಿದರು.
ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಿ “ಪೋಲಿಯೋ ಪ್ಲಸ್ ಸೇರಿದಂತೆ ಆರೋಗ್ಯಪೂರ್ಣ ಜಗತ್ತಿಗಾಗಿ ರೋಟರಿ ನಡೆಸುತ್ತಿರುವ ಅಭಿಯಾನ ಅದೇ ಗಂಭೀರತೆಯಲ್ಲಿ ಮುಂದುವರಿಯಬೇಕು.” ಎಂದರು.
ಝೋನಲ್ ಲೆಪ್ಟಿನೆಂಟ್ ಡಾ. ಸಂದೀಪ್ ಶೆಟ್ಟಿ ಶುಭ ಹಾರೈಸಿದರು.
ಕಾರ್ಯದರ್ಶಿ ಸುಹಾಸ್ ಭಂಡಾರ್‍ಕಾರ್ ಹಾಗೂ ರಮಾನಂದ ಕಾರಂತ ಗತ ವರ್ಷದ ಕಾರ್ಯಕ್ರಮಗಳ ವಿವರ ನೀಡಿದರು.
ಕಾವೇರಿ ಹಾಸ್ಪಿಟಲ್, ಬೆಂಗಳೂರು, ಕುಂಭಾಶಿ ವೆಂಕಟರಮಣ ಪ್ರಭು ಚಾರಿಟೆಬಲ್ ಟ್ರಸ್ಟ್ ಹಾಗೂ ರೋಟರಿ ಕುಂದಾಪುರ ದಕ್ಷಿಣದ ಸಹಭಾಗಿತ್ವದಲ್ಲಿ ವಿವಿಧ ಸಂಘಟನೆಗಳಿಗೆ ಸಾರ್ವಜನಿಕ ಉಪಯೋಗಕ್ಕಾಗಿ “ಆಕ್ಸಿಜನ್ ಕಾನ್ಸಂಟ್ರೆಟರ್” ನೀಡಲಾಯಿತು.
ವಿವಿಧ ತಳಿಯ ಔಷಧೀಯ ಗುಣಗಳುಳ್ಳ ಗಿಡಗಳನ್ನು ಡಾ. ಉತ್ತಮ ಕುಮಾರ್ ಶೆಟ್ಟಿ, ಗಣೇಶ ಶೆಣೈ ಮುನಿಯಾಲು, ವೆಂಕಟೇಶ ಪೈ ಸಹಕಾರದೊಂದಿಗೆ ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ವಿತರಿಸಲಾಯಿತು. ಚೈತನ್ಯ ವಿಶೇಷ ಶಾಲೆಗೆ ಕೊಡುಗೆ ನೀಡಲಾಯಿತು.
ನೂತನ ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ವಂದಿಸಿದರು.