ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಜಿಲ್ಲಾ ಸಹಶಿಕ್ಷಕರ ಸಂಘದ ಚುನಾವಣೆ ಗೊಂದಲದ ಗೂಡಾಗಿದ್ದು, ಅರ್ಹ ಶಿಕ್ಷಕರನ್ನೇ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವದು ನೂರಾರು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಪಟ್ಟಿಯಲ್ಲಿನ ಲೋಪ ಸರಿಪಡಿಸುವವರೆಗೂ ಚುನಾವಣೆ ನಡೆಸಬಾರದು ಎಂದು ಜಿಲ್ಲಾಅನುದಾನಿತ ಶಿಕ್ಷಕರ ಸಂಘ ಆಗ್ರಹಿಸಿತು.
ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ನಡೆದ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳು, ಶಿಕ್ಷಕರು, ಈವರೆಗೂ ಅಧಿಕಾರಲ್ಲಿದ್ದ ಪದಾಧಿಕಾರಿಗಳು ತಮ್ಮ ಮರು ಆಯ್ಕೆಯಾಗಿ ಇಂತಹ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು ಟೀಕಿಸಿದರು.
ತಮಗೆ ಬೇಕಾದವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಂಡು ಅರ್ಹ ಶಿಕ್ಷಕರನ್ನು ಕೈಬಿಡಲಾಗಿದೆ, ಇದರ ಹಿಂದೆ ಭಾರಿ ಷಡ್ಯಂತ್ರ ವಿದ್ದು, ಈ ಸಂಬಂಧ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದು, ಚುನಾವಣೆಗೆ ತಡೆಯಾಜ್ಞೆ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಶಿಕ್ಷಕರ ಹಿತ ಕಾಯುವಲ್ಲಿ ವಿಫಲರಾಗಿರುವ ಹಾಲಿ ಪದಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಸಂಘದ ಮತದಾರರ ಪಟ್ಟಿಯಿಂದ ಅರ್ಹ ಶಿಕ್ಷಕರನ್ನೇ ಕೈಬಿಡುವ ಮೂಲಕ ತಪ್ಪೆಸಗಿದ್ದಾರೆ, ಇಂತಹವರು ಪದಾಧಿಕಾರಿಗಳಾಗಲು ಯೋಗ್ಯರಲ್ಲ ಎಂದು ಅಭಿಪ್ರಾಯಪಟ್ಟ ಅನುದಾನಿತ ಶಾಲಾ ಶಿಕ್ಷಕರು, ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸುವವರೆಗೂ ಚುನಾವಣೆ ನಡೆಸಬಾರದು ಎಂದು ಆಗ್ರಹಿಸಿದರು.
ಟಿಜಿಟಿ ಶಿಕ್ಷಕರಿಂದಲೂ
ಬಹಿಷ್ಕಾರದ ನಿರ್ಧಾರ
ಈ ನಡುವೆ ಸಹಶಿಕ್ಷಕರ ಸಂಘದ ಚುನಾವಣೆ ಜು.3 ಎಂದು ಘೋಷಿಸಿದ್ದು, ಜೂ. 26 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ, ಈ ನಡುವೆ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಟಿಜಿಟಿ ಶಿಕ್ಷಕರೂ ಸಹಾ ಪದಾಧಿಕಾರಿಗಳ ಧೋರಣೆ ಖಂಡಿಸಿ 2022-27 ರ ಅವಧಿಗೆ ನಡೆಯುವ ಈ ಚುನಾವಣೆ ಗೊಂದಲಗಳಿಂದ, ಸಮಸ್ಯೆಗಳಿಂದ ಕೂಡಿದುದ, ಟಿಜಿಟಿ ಶಿಕ್ಷಕರ ಪರವಾಗಿ ಯಾರೂ ಚುನಾವಣೆಯಲ್ಲಿ ಸ್ವರ್ಧಿಸದೇ ಬಹಿಷ್ಕಾರ ಹಾಕುವುದಾಗಿ ಈ ಶಿಕ್ಷಕರ ವಾಟ್ಸಫ್ ಗ್ರೂಪ್ಗಳಲ್ಲಿ ವಿಷಯ ಹರಿಬಿಟ್ಟಿದ್ದಾರೆ.
ಈವರೆಗೂ ಪದಾಧಿಕಾರಿಗಳಾಗಿದ್ದ ಗುಂಪಿನಿಂದ ಬೇಸತ್ತಿರುವ ಮತ್ತೊಂದು ಗುಂಪಿನ ಸದಸ್ಯರು ಈಗಾಗಲೇ ಹೈಕೋರ್ಟ್ ಕದ ತಟ್ಟಿದ್ದು, ಇನ್ನೆರಡು ದಿನಗಳಲ್ಲಿ ತಡೆಯಾಜ್ಞೆ ತರುವ ಮಾತನಾಡುತ್ತಿದ್ದಾರೆ. ಒಟ್ಟಾರೆ ಹೈಕೋರ್ಟ್ ತೀರ್ಮಾನವೇ ಅಂತಿಮವಾಗಲಿದ್ದು, ಚುನಾವಣೆ ನಡೆಯುವುದೋ ಇಲ್ಲವೋ ಕಾದು ನೋಡಬೇಕಷ್ಟೆ.
ಸೋಮವಾರ ಸಂಜೆ ನಡೆದ ಅನುದಾನಿತ ಶಾಲಾ ಶಿಕ್ಷಕರ ಸಂಘದ ಸಭೆಯಲ್ಲಿ ಸುಭಾಷ್ ಶಾಲೆ ಮುಖ್ಯಶಿಕ್ಷಕ ವೇಣುಗೋಪಾಲ್, ವಕ್ಕಲೇರಿಯ ದಾಸಪ್ಪ, ತೊಟ್ಲಿ ಶಾಂತಿನಿಕೇತನ ಶಾಲೆಯ ಮುಖ್ಯಶಿಕ್ಷಕ ರಮೇಶ್ಗೌಡ, ಇತರೆ ಶಾಲೆಗಳ ಶಿಕ್ಷಕರಾದ ಮೆಥೋಡಿಸ್ಟ್ ಶಾಲೆಯ ಸವಿತಾ, ಮಂಜುಳಾ, ಕೆಂಬೋಡಿ ಜನತಾ ಶಾಲೆಯನಾರಾಯಣಸ್ವಾಮಿ, ಜಗದೀಶ್, ಅಶೋಕ್, ಬೈಯಮ್ಮ,ಅಂಬರೀಷ್,ರೂಪವತಿ, ವೆಂಕಟೇಶ್, ವಿಜಯಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.