ಉಡುಪಿ ಲೋಕ್ ಅದಾಲತ್‌: ಮೆಟ್ಟಿಲೇರಲಾಗದ ವೃದ್ದೆಯ ಬಳಿ ನ್ಯಾಯಾಧೀಶರೆ ಬಂದು ವಿಚಾರಣೆ ನಡೆಸಿದರು!

JANANUDI.COM NETWORK


ಉಡುಪಿ : ನ್ಯಾಯಾಲಯದ ಮೆಟ್ಟಿಲು ಹತ್ತಲಾಗದೆ ರಿಕ್ಷಾದಲ್ಲಿಯೆ ನ್ಯಾಯಲಯದ ಬಳಿ ರಿಕ್ಷಾದಲ್ಲಿಯೆ ಕುಳಿತ 80 ವರ್ಷದ ವೃದ್ದೆಯ ಬಳಿಗೆ ಸ್ವತಹ ನ್ಯಾಯಾಧೀಶರೆ ಅವರಿದ್ದಲ್ಲಿ ತೆರಳಿ, ಪ್ರಕರಣದ ಹೇಳಿಕೆ ಆಲಿಸಿ ದಾಖಲಿಸಿಕೊಂಡ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ಜೂನ್ 25ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ‘ರಾಷ್ಟ್ರೀಯ ಲೋಕ್ ಅದಾಲತ್’ನ್ನು ಆಯೋಜಿಸಲಾಗಿತ್ತು.
2011ರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕ್ ಅದಾಲತ್‌ನಲ್ಲಿ ಭಾಗಿಯಾಗಲು 80 ವರ್ಷದ ವೃದ್ದೆ ದೇವಕಿ ಶೆಡ್ತಿ ಆಟೋ ರಿಕ್ಷಾದಲ್ಲಿ ನ್ಯಾಯಾಲಯಕ್ಕೆ ತೆರಳಿದ್ದರು. ಈ ವೇಳೆ, ಆಕೆಗೆ ನ್ಯಾಯಾಲಯದ ಮೆಟ್ಟಿಲು ಹತ್ತಲಾಗದ ಕಾರಣ, ತಮ್ಮ ಮಗಳು ಜಯಂತಿಯವರಿಗೆ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಅಧಿಕಾರವನ್ನು ನೀಡಿದ್ದರು.ಹಾಗಾಗಿ ವೃದ್ದೆ ದೇವಕಿ ಶೆಡ್ತಿ ಪರವಾಗಿ ಅವರ ಮಗಳು ವಾದವನ್ನು ಆಲಿಸಲು ನ್ಯಾಯಾಲಯದ ಒಳಗೆ ಹೋಗಿದ್ದರು.
ವಿಷಯ ತಿಳಿದ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್ ಎಸ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶರ್ಮಿಳಾ ಎಸ್ ಮತ್ತು ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಎರಡು ಕಡೆಯ ವಕೀಲರುಗಳು, ದೇವಕಿ ಶೆಡ್ತಿ ಕುಳಿತಿದ್ದ ರಿಕ್ಷಾದ ಬಳಿ ಬಂದು ಅವರ ಹೇಳಿಕೆ ಪಡೆದುಕೊಂಡಿದ್ದಲ್ಲದ್ದೆ, ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
ನ್ಯಾಯಾಧೀಶರ ಈ ನಡೆ, ಸರಳತೆಗೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.ಈ ಬಾರಿಯ ಅದಾಲತ್‌ನಲ್ಲಿ ಒಂದೇ ದಿನ ಒಟ್ಟು 30,773 ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿಲಾಗಿದೆ ಎಂದು ತಿಳಿದು ಬಂದಿದೆ.