ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು – ಜಿಲ್ಲಾಧಿಕಾರಿ ವೆಂಕಟ್ ರಾಜಾ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಸಾರ್ವಜನಿಕರು ತಾಲ್ಲೂಕು ಕಚೇರಿ ಮತ್ತು ಗ್ರಾಮದ ನಾಡ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ವೆಂಕಟರಾಜ್ ಅವರು ತಿಳಿಸಿದರು.
ಇಂದು ಶ್ರೀನಿವಾಸಪುರ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿಗೆ ಬಂದ ಅರ್ಜಿಗಳನ್ನು ಸ್ವೀಕರಿಸಬೇಕು , ಈ ಅರ್ಜಿಯ ಪೂರ್ಣ ಜವಾಬ್ದಾರಿ ನನ್ನದು ಎಂದು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು , ಅಧಿಕಾರಿಗಳು ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು, ಕಚೇರಿಗೆ ಬಂದ ಅರ್ಜಿಗಳನ್ನು ಸ್ವೀಕರಿಸಿ ಅರ್ಜಿಯನ್ನು ಸ್ಕ್ಯಾನ್ ಮಾಡಿಕೊಳ್ಳಬೇಕು , ಸಾಧ್ಯವಾದರೆ ಈ ಅರ್ಜಿಯನ್ನು ಪರಿಹರಿಸಬೇಕು .
ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಗೆ ಹೋಗಿ ಎಂದು ಅರ್ಜಿದಾರರಿಗೆ ಪೂರ್ಣ ಮಾಹಿತಿಯನ್ನು ನೀಡಿ ಸಂಬಂಧಿತ ಇಲಾಖೆಯವರು ಪರಿಚಯವಿದ್ದರೆ ಅರ್ಜಿದಾರರು ಬರುತ್ತಿದ್ದಾನೆ ಎಂದು ಮಾಹಿತಿ ನೀಡಬೇಕು . ಏಳು ದಿನಗಳ ನಂತರ ಅರ್ಜಿಯ ಕಾರ್ಯ ಸ್ಥಿತಿಯನ್ನು ಅಧಿಕಾರಿಗಳು ವಿಚಾರಿಸಿಕೊಳ್ಳಬೇಕು . ಈ ಕ್ರಿಯೆಯಿಂದ ಸಮಸ್ಯೆಗಳು ಸರಳವಾಗಿ ಬಗೆಹರಿಯುತ್ತವೆ . ಅಧಿಕಾರಿಗಳು ನಿಷ್ಠಾವಂತರಾಗಿ ಬಡ ಜನರ ಪರವಾಗಿ ಕಾರ್ಯನಿರ್ವಹಿಸಬೇಕು.
ಕಡತಗಳನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು , ಅಧಿಕಾರಿಗಳು ಜನಸೇವೆಯನ್ನು ಉನ್ನತ ಸೇವೆ ಎಂದು ತಿಳಿದು ಕಾರ್ಯನಿರ್ವಹಿಸಬೇಕು . ಪ್ರತಿಯೊಂದು ಅರ್ಜಿಯನ್ನು ಕಡ್ಡಾಯವಾಗಿ ಟಪಾಲ್‌ನಲ್ಲಿ ಸ್ಕ್ಯಾನ್ ಮಾಡಿಕೊಳ್ಳಬೇಕು . ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದಿರುವ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು . ಸರ್ಕಾರವು ಸ್ವಾವಲಂಬನೆ ಎಂಬ ಆ್ಯಪ್ ಅನ್ನು ಜಾರಿಗೆ ತಂದಿದೆ . ಈ ಆ್ಯಪ್‌ನ ಪೂರ್ಣ ಮಾಹಿತಿಯನ್ನು ರೈತರಿಗೆ ಅಧಿಕಾರಿಗಳು ತಿಳಿಸಬೇಕು . ಅಧಿಕಾರಿಗಳು ದಿನಚರಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು .
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು . ಸಭೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರರಾದ ಶರೀನ್ ತಾಜ್ , ಪೊಲೀಸ್ ಅಧಿಕಾರಿಗಳಾದ ನಾರಾಯಣಸ್ವಾಮಿ , ಶ್ರೀನಿವಾಸಪುರ ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.