ಕೋಮು ಪ್ರಕರಣಗಳು ಹಿಂಸಾಚಾರಗಳು  ಹೆಚ್ಚುತ್ತೀವೆ – ನಮ್ಮ ಹುಟ್ಟು ಯಾವ ಧರ್ಮದಲ್ಲಾಬೇಕೆಂದು ನಿರ್ಧರಿಸಿ ಹುಟ್ಟಲು ಯಾರಿಗೂ ಸಾಧ್ಯವಿಲ್ಲ

JANANUDI.COM NETWORK

ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶಾದ್ಯಂತ, ಕೋಮು ಗಲಬೆ, ಹಿಂಸಾಚಾರ, ಭ್ರಷ್ಟಾಚಾರ, ಕೊಲೆಗಳು, ಅತ್ಯಾಚಾರಗಳು, ಆತ್ಮಹತ್ಯೆ ಪ್ರಕರಣಗಳು, ಸರಕಾರಿ ನೌಕರಿ ದಕ್ಕಿಸಿಕೊಳ್ಳಲು ತೆಗೆದು ಕೊಳ್ಳುವ ಲಂಚ, ಇನ್ನಿತರ ಲಂಚವತಾರಗಳು ಇಂತವುಗಳಿಗೆಲ್ಲ ಕಡಿವಾಣ ಇಲ್ಲದಂತಾಗಿ ಎಗ್ಗಿಲ್ಲದೆ ಸಾಗುತಿದೆ. ದೇಶ ದ್ರೋಹಿಗಳಿಗೆ ಜಯಕಾರ, ಮಹಾತ್ಮ ಗಾಂಧಿಯ ಹತ್ಯೆ ಮಾಡಿದವರಿಗೆ ಸಹ ಜಯಕಾರ, ಅವರನ್ನು ರಾಷ್ಟ್ರೀಯ ಹೀರೊಗಳತೆ ಪ್ರತಿಬಿಂಬಿಸುವುದು ಇಂದಿನ ಪೀಳಿಗೆಯಲ್ಲಿ ಕೆಲವರಿಗೆ ಚಾಳಿಯಾಗಿದೆ. ಅಂದರೆ ಇವತ್ತಿನ ಯುವ ಜನಾಂಗಕ್ಕೆ ಸಮಾಜ ಘಾತುಕ ಸಂಗತಿಗಳನ್ನು ಅವರ ಮನಸಿನೊಳಗೆ ತುಂಬುವಂತಹ ಹೇಯ ಕ್ರತ್ಯ ನಡೆಯುತ್ತದೆ.

 ರಾಷ್ಟ್ರ ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ ಕೌರ್ಯತೆ ತಾಂಡವಾಡತೊಡಗಿದೆ. ಕಣ್ಣ ಮುಂದೆ ಅಹಿತಕರ ಘಟನೆಗಳು ನಡೆದಾಗಲು ಮಂತ್ರಿಗಳು, ಸಂಬಂಧ ಪಟ್ಟವರು ಕಂಡು ಕಾಣದಂತೆ ಸುಮ್ಮನಿರುತ್ತಾರೆ, ಅಂದರೆ ಇಂತಹ ದೋರಣೆಗಳು ತಮಗೆ ನ್ಯಾಯ ಸಮ್ಮತವೆಂದು ಪರಿಗಣಿಸಿದಂತೆ ಅವರು ಸುಮ್ಮನಿರುತ್ತಾರೆ.

   ಪಠ್ಯ ಪುಸ್ತಕಗಳಲ್ಲಿ ತಮಗೆ ಬೇಕಾದದನ್ನು ತುರುಕಿ, ಮಾನವೀಯ ಮೌಲ್ಯಗಳಿರುವ ಪಠ್ಯಗಳನ್ನು ತೆಗೆದು ಹಾಕಿ, ಅಥವ ತಿದ್ದಿ ಅವಮಾನ ಮಾಡುತ್ತಾ ಇರುವಾಗ, ಸರಕಾರ ಮೌನಕ್ಕೆ ಶರಣಾಗಿ, ಅಸಹಜ ಪಾಠಗಳನ್ನು ಅಚ್ಚು ಹಾಕಿಸಿ, ಕೊನೆಗೆ ಜನತೆಯ ತೀವ್ರ ವಿರೋಧ ಕಂಡು ಬಂದು, ಈಗ ಶರಣಾಗಿ, ಪುಸ್ತಕ ಪುನರಚ್ಚು ಹಾಕುತ್ತೇವೆ ಎಂದು ಹೇಳುತ್ತಾರೆ. ಜನತೆ ವಿರೋಧ ಮಾಡದೆ ಇದ್ದದೆ ಹೌದಾದರೆ, ಇದೇ ಮೌಢ್ಯಗಳನ್ನು ತುಂಬಿದ ಪಾಠಗಳನ್ನು ನಮ್ಮ ಮಕ್ಕಳು ಕಲಿಯಬೇಕಿತ್ತು, ಇದು ಒಂತರಹ ನಾಚಿಕೆಯ ಸಂಗತಿ.

   ಪಠ್ಯಪುಸ್ತಕಗಳಲ್ಲಿ ಒಂದು ಸಂಘದ ಅಜೆಂಡಾಗಳನ್ನು ತುರುಕಿ, ಮಕ್ಕಳ ಮನದಲ್ಲಿ ವಿಷ ಬೀಜ ಬಿತ್ತಿ ರಾಷ್ಟ್ರದ ಭವಿಸ್ಯಕ್ಕೆ ಮಾರಕವಾಗುವಂತೆ ಮಾಡುವುದೇ ಗುರಿಯಾಗಿದಂತೆ ಕಂಡು ಬರುತ್ತದೆ.ಜಾತಿ ಧರ್ಮಗಳ ವಿಷ ಬೀಜಗಳನ್ನು ಬಿತ್ತಿದರೆ, ಯಾವ ದೇಶವು ಉದ್ದಾರ ಆಗುವುದಿಲ್ಲ, ಸದಾ ಹಿಂಸೆ ತಾಂಡವಾಡುತ್ತಾ, ದೇಶವು ಕೋಮು ಜ್ವಾಲೆಯಲ್ಲಿ ಬೆಂದು ಹೋಗುವುದರಲ್ಲಿ ಅನುಮಾನವಿಲ್ಲ.

      ಕೋಮುವಾದದಿಂದ  ಹಲವು ಅಮಾನವೀಯ ಘಟನೆಗಳು ರಾಜ್ಯದಲ್ಲಿ ನಡೆದಾಗ ಒಂದು ಕಡೆ ನಾನು ಬರೆದಿದ್ದೆ, ಕರ್ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ  ಹಾಳು ಮಾಡಿಕೊಳ್ಳುತ್ತದೆಯೆಂದು, ಇದೀಗ ಅದು ಸಾಬಿತಾಯಿತು.  ರಾಷ್ಟ್ರಕವಿ ಕುವೆಂಪು ಅವರು  ಕರ್ನಾಟಕವನ್ನು ʼಸರ್ವಾಜನಾಂಗದ ಶಾಂತಿಯ ತೋಟʼ ಎಂದು ವರ್ಣಿಸಿದ್ದರು, ವಿಪರ್ಯಾಸವೆಂದರೆ ಈ ವರ್ಣನೆಯನ್ನು ಇದೀಗ ಕರ್ನಾಟಕ ಕಳೆದುಕೊಳ್ಳುವ ಅಂಚಿನಲ್ಲಿದೆ. ದಿನೇ ದಿನೇ ಕೋಮು ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಮೂರೂವರೆ ವರ್ಷಗಳಲ್ಲಿ 700ಕ್ಕೂ ಹೆಚ್ಚು ಕೋಮು ಘರ್ಷಣೆಗಳು ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿರುವ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಬಹಿರಂಗಪಡಿಸಿದೆ.ಒಂದು ಕೋಮಿನವನ ಅಥಾವ ಕೋಮಿನವಳ ಜೊತೆ ಅನ್ಯ ಕೋಮಿನ ಗಂಡು ಹೆಣ್ಣು ಜೊತೆಗಿದ್ದರೆ, ಅದೇ ಮಾಹಾಪರಾದ ಎಂಬಂತೆ ಪರಿಗಣಿಸುವ ಚಾಳಿ ಆರಂಭವಾಗಿದೆ. ವಯಸಿಗೆ ಬಂದವರನ್ನು ಸ್ವತಹ ತಂದೆ ತಾಯಿಗಳಿಗೆ ಕೇಳಲು ಅಧಿಕಾರ ಇಲ್ಲದಿರುವಾಗ, ಇತರರು ಅವರನ್ನು ಅಡ್ಡಗಟ್ಟಿ, ಹೊಡೆಯುವುದು ಬಡಿಯುವುದು, ಪೊಲೀಸರಿಗೆ ತಿಳಿಸುವಂಥ ಅನಾಗರಿಕ ರೀತಿ ವರ್ತಿಸಲಾಗುತ್ತದೆ. ನಮ್ಮ ದೇಶದಲ್ಲಿ ಯಾವುದೇ ಜಾತಿ ಧರ್ಮದವರ ಜೊತೆ ಯಾರು ಕೂಡ ಒಡಾಡಬಹುದು, ಅದು ಅವರ ಹಕ್ಕು, ಅವರ ಸ್ವಾತಂತ್ರ, ಬಲವಂತಾವಾಗಿ ತನ್ನ ಜೊತೆಯಲ್ಲಿ ಇರಬೇಕು, ತಿರುಗಾಡಬೇಕು ಎಂದು ಹೇಳಿದಲ್ಲಿ, ಮಾತ್ರ ಅದು ಅಪರಾದವಾಗುತ್ತೆ, ಅವರ ಸ್ವೈಚ್ಚೆಯಂತೆ ಜೊತೆ ಮಾತನಾಡಿದರೆ, ತಿರುಗಾಡಿದರೆ ಅದು ಅಪರಾದವಲ್ಲ.

    ನಮ್ಮ ರಾಜ್ಯದಲ್ಲಿ ಕಳೆದ ಮೂರುವರೆ ಧಾರ್ಮಿಕ ಮತ್ತು ಕೋಮು ವಿಷಯಗಳಿಗೆ ಸಂಬಂಧಿಸಿದ 700 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ರಾಜ್ಯವು ಕಂಡಿದೆ ಎಂದು ವರದಿ ತಿಳಿಸುತ್ತದೆ. ಕರ್ನಾಟಕ ರಾಜ್ಯ ಪೊಲೀಸರ ಮೂಲಗಳ ಪ್ರಕಾರ, ರಾಜ್ಯದಲ್ಲಿ ಕೇವಲ 3 ವರ್ಷ ೪ ತಿಂಗಳ ಅವಧಿಯಲ್ಲಿ (ಜನವರಿ 2019 ರಿಂದ ಏಪ್ರಿಲ್ 2022) ಜಾತಿ, ಧರ್ಮ ಸೇರಿದಂತೆ ಕೋಮು ಸಂಬಂಧಿಸಿದ 752 ಕ್ಕೂ ಹೆಚ್ಚು ಪ್ರಕರಣಗಳು (IPC 295 ರಿಂದ 297) ದಾಖಲಾಗಿವೆ. (ಇಲ್ಲಿ ಮೇ, ಜೂನ್ ತಿಂಗಳಿನಲ್ಲಿ ನಡೆದ ಘಟನೆಗಳು ಸೇರಿಸಿಲ್ಲ)

     2019 ರಲ್ಲಿ 197 ರಷ್ಟಿತ್ತು. ಆದರೆ ನಂತರದ ಎರಡು ವರ್ಷಗಳಲ್ಲಿ 212 ಮತ್ತು 204 ಕ್ಕೆ ಏರಿದೆ. ಈ ವರ್ಷ ಕೇವಲ ನಾಲ್ಕು ತಿಂಗಳಲ್ಲಿ 97 ಕ್ಕೂ ಹೆಚ್ಚು ಪ್ರಕರಣಗಳು ಈಗಾಗಲೇ ದಾಖಲಾಗಿವೆ ಎಂಬ ಆತಂಕದ ವರದಿಯನ್ನು ಬಹಿರಂಗಪಡಿಸಿದೆ.

   ಇದೆಲ್ಲ ನೋಡುವಾಗ ಆಡಳಿತ ನಡೆಸುವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದೇ ಹೇಳಬೇಕಾಗುತ್ತೆ, ಇಲ್ಲ ಆಡಳಿತ ನಡೆಸಲಿಕ್ಕೆ ಗೊತ್ತಿಲ್ಲವೆಂದು ಜನತೆಗೆ ಪರೋಕ್ಷವಾಗಿ ಹೇಳಿದಂತತಾಗುತ್ತದೆ.

      ಎಲ್ಲರೂ ಇಳಿದುಕೊಳ್ಳಬೇಕಾದ ವಿಶಯ ಏನೆಂದರೆ, ಯಾರೂ ಕೂಡ ತಮಗೆ, ಇದೇ ಧರ್ಮದಲ್ಲಿ  ಹುಟ್ಟಬೇಕೆಂದು ಹುಟ್ಟಿದಲ್ಲ, ಒಂದು ಧರ್ಮದಲ್ಲಿ ಹುಟ್ಟಿದ್ದೇವೆ, ಆ ಧರ್ಮದ ಪ್ರಕಾರ ನೆಡೆದುಕೊಳ್ಳುವುದು ಅನಿವಾರ್ಯ, ಹಾಗೇ ನಡೆದುಕೊಳ್ಳ ಬೇಕು ಕೂಡ. ನಮ್ಮ ಹುಟ್ಟು ಯಾವ ಧರ್ಮದಲ್ಲಿ ಆಗಬೇಕೆಂದು ಯಾರೂ ಕೂಡ ನಿರ್ಧರಿಸಿ ಹುಟ್ಟಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ನಾವೆಲ್ಲರೂ ಎಲ್ಲ ಧರ್ಮ ಜಾತಿಯವರಿಗೆ ಗೌರವ ಕೊಟ್ಟು ಜೀವಿಸಲು ಕಲಿಯಬೇಕು. ಅದುವೇ ನೈಜ್ಯ ಧರ್ಮ.