ಕೋಲಾರ ಡಿಸಿಸಿ ಬ್ಯಾಂಕಿನಿಂದ ಪಕ್ಷಾತೀತ,ಜಾತ್ಯಾತೀತವಾಗಿ ಆರ್ಥಿಕ ನೆರವು-ಆಣೆ,ಪ್ರಮಾಣ ಮಾಡಿಸಿ ಸಾಲ ನೀಡುವ ದುಸ್ಥಿತಿ ಬಂದಿಲ್ಲ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಪ್ರತಿ ಹೆಣ್ಣು ಮಕ್ಕಳಿಗೂ ಬಡ್ಡಿ ರಹಿತ ಸಾಲ ಸೌಲಭ್ಯ ತಲುಪಿಸುವ ಸಂಕಲ್ಪ ಹೊಂದಿರುವ ಡಿಸಿಸಿ ಬ್ಯಾಂಕ್‍ಗೆ ಆಣೆ,ಪ್ರಮಾಣ ಮಾಡಿಸಿಕೊಂಡು ಸಾಲ ನೀಡುವ ದುಸ್ಥಿತಿ ಬಂದಿಲ್ಲ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಶಾಖೆ ಆವರಣದಲ್ಲಿ ಕೋಲಾರ ನಗರದ ಹಲವಾರು ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್ ಸಾಲ ನೀಡುವಾಗ ಜಾತಿ, ಪಕ್ಷ ಯಾವುದು ಎಂದು ಕೇಳಿದ ನಿದರ್ಶನವಿದ್ದರೆ ಗಮನಕ್ಕೆ ತನ್ನಿ ಎಂದು ಮಹಿಳೆಯರಿಗೆ ಮನವಿ ಮಾಡಿದ ಅವರು, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ಅರ್ಹ ಮಹಿಳೆ ಡಿಸಿಸಿ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿ ಸಾಲ ಪಡೆಯಲು ಸಾಧ್ಯವಾಗಿಲ್ಲದಿದ್ದರೆ ತಮ್ಮ ಗಮನಕ್ಕೆ ತನ್ನಿ ಕೂಡಲೇ ಸಾಲ ಒದಗಿಸುವುದಾಗಿ ಘೋಷಿಸಿ, ಬ್ಯಾಂಕಿನಲ್ಲಿ ಲಾಟರಿ ಹಾಕಿ ಸಾಲ ನೀಡುವ ಯಾವುದೇ ಪದ್ದತಿ ಇಲ್ಲ ಎಂದು ಸ್ವಷ್ಟಪಡಿಸಿದರು.
ಅವಿಭಜಿತ ಜಿಲ್ಲೆಯ ತಾಯಂದಿರು ಡಿಸಿಸಿ ಬ್ಯಾಂಕನ್ನು ತಮ್ಮ ತವರು ಮನೆ ಎಂದು ಭಾವಿಸಿದ್ದಾರೆ, ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅವರ ಖಾತೆಗಳಿಗೆ ಸಾಲದ ಹಣ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ, ಸೊಸೈಟಿಗಳಲ್ಲಿ ಭ್ರಷ್ಟಾಚಾರ ಇಣುಕಿ ನೋಡಲು ಅವಕಾಶವಿಲ್ಲದಂತೆ ದೇಶದಲ್ಲೇ ಮೊದಲಬಾರಿಗೆ ಪ್ಯಾಕ್ಸ್‍ಗಳ ಗಣಕೀಕರಣ ಮುಗಿಸಿದ್ದೇವೆ ಎಂದು ತಿಳಿಸಿದರು.
ತಾಯಂದಿರಿರನ್ನು ಎಂದೂ ಬ್ಯಾಂಕ್ ಸಿಬ್ಬಂದಿಯಾಗಲಿ, ಆಡಳಿತ ಮಂಡಳಿಯಾಗಲಿ ನಿಮ್ಮ ಜಾತಿ,ಪಕ್ಷ ಯಾವುದು ಎಂದು ಕೇಳಿರುವ ನಿದರ್ಶನವಿದ್ದರೆ ದಯವಿಟ್ಟು ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ ಅವರು, ಪ್ರತಿ ಕುಟುಂಬಕ್ಕೂ ಸಹಕಾರ ಸಂಘದ ಸದಸ್ಯತ್ವ ನೀಡಿ, ಸ್ವಾವಲಂಬಿ ಬದುಕಿಗೆ ನೆರವಾಗುವ ಗುರಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯದ್ದಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೂ ಬ್ಯಾಂಕ್ ಉಳಿಸುವ ಮಾತನ್ನಾಡಿದ ನಿದರ್ಶವಿಲ್ಲ, ಇದೀಗ 44 ಕೋಟಿಯಿದ್ದ ಠೇವಣಿ 400 ಕೋಟಿ ದಾಟಿದೆ, ಸಾಲ ವಿತರಣೆಯೂ 1300 ಕೋಟಿಗೂ ಹೆಚ್ಚಾಗಿದ್ದು, ನಿಯಮಾನುಸಾರ ಮಹಿಳೆಯರು ಸಂಘ ರಚಿಸಿಕೊಂಡು ಉಳಿತಾಯದ ಹಣ ಇಟ್ಟು, ಸಾಲಕ್ಕೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ,ರಾಜ್ಯ ಸರ್ಕಾರಗಳ ಅಡಿಯಲ್ಲಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ ಎಂದ ಅವರು, ಆದರೆ ಎಂದೂ ಸಹಕಾರ ತತ್ವಗಳಿಗೆ ವಿರುದ್ದವಾಗಿ ನಡೆದುಕೊಂಡಿಲ್ಲ, ಎಲ್ಲಾ,ಜಾತಿ,ಧರ್ಮದವರಿಗೂ ಸಾಲ ಒದಗಿಸಿದ್ದೇವೆ, ಸ್ವಸಹಾಯ ಸಂಘಗಳಲ್ಲಿ ಪಾರದರ್ಶಕತೆ ತರಲು ಇ-ಶಕ್ತಿ ಅನುಷ್ಟಾನವನ್ನು ದೇಶದಲ್ಲೇ ಮೊದಲು ಮಾಡಿದ ಹೆಗ್ಗಳಿಕೆ ಡಿಸಿಸಿ ಬ್ಯಾಂಕಿನದ್ದು ಎಂದರು.
ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಬ್ಯಾಂಕಿನ ಎನ್‍ಪಿಎ ಕಡಿಮೆಯಾಗಿದೆ, ನಷ್ಟದಲ್ಲಿದ್ದ ಬ್ಯಾಂಕನ್ನು ಲಾಭದತ್ತ ತಂದು ಸಹಕಾರ ರಂಗವನ್ನು ನಂಬಿದ ಜಿಲ್ಲೆಯ ರೈತರು,ಮಹಿಳೆಯರ ಹಿತ ರಕ್ಷಣೆ ಮಾಡಿದ ಆತ್ಮತೃಪ್ತಿ ತಮಗಿದೆ, ಯಾರೇ ಟೀಕೆ ಮಾಡಿದರೂ ಅದಕ್ಕಿ ಪ್ರತ್ಯುತ್ತರ ನೀಡುವ ಗೋಜಿಗೆ ಹೋಗುವುದಿಲ್ಲ, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಮಹಿಳೆಯರು ಸಾಲ ಪಡೆಯುವುದರ ಜತೆಗೆ ನಿಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿಡಿ, ಇದರಿಂದ ಮತ್ತಷ್ಟು ಮಹಿಳೆಯರು,ರೈತರಿಗೆ ಸಾಲ ಸೌಲಭ್ಯ ವಿಸ್ತರಿಸಲು ಸಹಕಾರಿಯಾಗಲಿದೆ ಎಂದರು.
ಗೋವಿಂದಗೌಡರು ಬ್ಯಾಂಕನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ, ಅವರ ಬೆನ್ನಿಗೆ ಆಡಳಿತ ಮಂಡಳಿ ಇದೆ ಎಂದ ಅವರು, ಇದೀಗ ಬ್ಯಾಂಕಿನ ಅಭಿವೃದ್ದಿಯಿಂದಾಗಿ ಮತ್ತೆ 13 ಹೊಸ ಶಾಖೆಗಳನ್ನು ಸ್ಥಾಪಿಸಲು ಅನುಮತಿ ಪಡೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಷ್, ಅಮೀನಾ ಮತ್ತಿತರರಿದ್ದರು.