ಸಹಕಾರಿ ವ್ಯವಸ್ಥೆ ಉಳಿದರೆ ಮಾತ್ರ ಬಡವರ ಉಳಿವು ಸಾಧ್ಯ – ಪ್ರತಿ ಕುಟುಂಬಕ್ಕೂ ಸಹಕಾರಿ ಸದಸ್ಯತ್ವ: ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಸಹಕಾರಿ ವ್ಯವಸ್ಥೆ ಉಳಿದರೆ ಮಾತ್ರ ಬಡವರು ಉಳಿವು, ಈ ವ್ಯವಸ್ಥೆಯ ಕುರಿತು ಇನ್ನೂ ಅರಿವು ಮೂಡದಿರುವುದು ದುರಂತವಾಗಿದ್ದು, ಪ್ರತಿ ಕುಟುಂಬಕ್ಕೂ ಸಹಕಾರಿ ಸದಸ್ಯತ್ವ ನೀಡುವ ಅಗತ್ಯವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಕಡಗಟ್ಟೂರು ಗ್ರಾಮದಲ್ಲಿ ಶುಕ್ರವಾರ ನಡೆದ ರೇಷ್ಮೆ ಬೆಳೆಗಾರರ ಹಾಗೂ ಸೇವಾ ಸಹಕಾರ ಸಂಘದ 2022-22ನೇ ಸಾಲಿ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ವ್ಯವಸ್ಥೆಯ ಕುರಿತು ಇನ್ನೂ ಅನೇಕರಿಗೆ ಅರಿವಿಲ್ಲ, ಈ ವ್ಯವಸ್ಥೆಯಿಂದ ಮಾತ್ರ ಕಟ್ಟಕಡೆಯ ಬಡವನಿಗೂ ಸಾಲ ಸೌಲಭ್ಯ ಸಿಗಲು ಸಾಧ್ಯ ಎಂಬ ಸತ್ಯದ ಅರಿವು ಮೂಡಿಸಬೇಕಾಗಿದೆ, ಪ್ರತಿಕುಟುಂಬವನ್ನು ಸಹಕಾರ ರಂಗ ತಲುಪಬೇಕಾಗಿದೆ ಎಂದರು.
ಸಹಕಾರ ಸಂಘಗಳ ಮೂಲಕ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ. ಆದರೆ ಸೌಲಭ್ಯ ಪಡೆದುಕೊಂಡು ತಮ್ಮ ಉಳಿತಾಯದ ಹಣವನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ಇಡುವುದು ಯಾವ ನ್ಯಾಯ ಎಂದು ಜನತೆಯನ್ನು ಪ್ರಶ್ನಿಸಿದರು.
ರೈತರು ಭಿಕ್ಷುಕರಲ್ಲ, ಸ್ವಾವಲಂಬಿ ಬದುಕು ನಡೆಸುತ್ತಿರುವವರು, ಮಹಿಳೆಯರು, ಅನ್ನದಾತರ ಸಬಲೀಕರಣ ಸಹಕಾರ ರಂಗದಿಂದಲೇ ಸಾಧ್ಯ ಎಂದ ಅವರು, ನಮ್ಮನ್ನು ನಾವು ಮೊದಲು ನಂಬಬೇಕು. ಸಹಕಾರಿ ವ್ಯವಸ್ಥೆಯನ್ನು ಉಳಿಸಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.
ಉಳಿತಾಯದ ಹಣವನ್ನು ಸಹಕಾರ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಬಲವರ್ಧನೆಗೆ ಸಹಕಾರ ನೀಡಬೇಕು. ಎಷ್ಟೇ ಆರೋಪ,ದೂರುಗಳು ದೂರುಗಳು ಬಂದರೂ ಮತ್ತಷ್ಟು ಒಳ್ಳೆಯ ಕೆಲಸ ಮಾಡಿ ತೋರಿಸುತ್ತೆವೆ ಎಂದು ಸಾರಿದರು.
ಸೊಸೈಟಿ ಅಧ್ಯಕ್ಷರೂ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಕೆ.ವಿ.ದಯಾನಂದ್ ವಿದ್ಯಾವಂತರಾಗಿದ್ದು ಠೇವಣಿ ಹೆಚ್ಚಿಸಲು ಒತ್ತು ನೀಡಬೇಕು. ನನಗೆ ನೂತನ ಶಾಖೆ ಮಾಡುವ ಆಸಕ್ತಿಯಿರಲಿಲ್ಲ. ಆದರೆ ಆಡಳಿತ ಮಂಡಳಿಯ ನಿರ್ದೇಶಕರ ಒತ್ತಾಯದಿಂದ ಎರಡೂ ಜಿಲ್ಲೆಯಲ್ಲಿ 13 ಹೊಸ ಶಾಖೆ ಆರಂಭಿಸಲು ಕ್ರಮಕೈಗೊಳ್ಳಾಗಿದೆ ಎಂದರು.
ಎಂಎಲ್ಸಿ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಎಲ್.ಅನಿಲ್ ಕುಮಾರ್ ಮಾತನಾಡಿ, ಹಣಕಾಸು ವರ್ಷದಲ್ಲಿ ಎರಡೂ ಜಿಲ್ಲೆಯಲ್ಲಿ ಸರ್ವ ಸದಸ್ಯರ ಮಹಾಸಭೆ ನಡೆಸುತ್ತಿರುವ ಹೆಗ್ಗಳಿಕೆ ಕಡಗಟ್ಟೂರು ಸೊಸೈಟಿಯದ್ದಾಗಿದೆ, ಇದು ಬಹಳ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಸೊಸೈಟಿ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಸಮನ್ವಯತೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. 2014ರ ಪೂರ್ವದಲ್ಲಿ ಹಾಲು ಬಿಲ್ ಕೊಡಲು ಆಗದ ಸ್ಥಿತಿಯಲ್ಲಿ ಡಿಸಿಸಿ ಬ್ಯಾಂಕ್ ಇತ್ತು. ವೈದ್ಯನಾಥನ್ ವರದಿ ಆಧಾರದ ಮೇಲೆ ಚುನಾವಣೆ ನಡೆಯಿತು. ಆನಂತರ ಅಧಿಕಾರಕ್ಕೆ ಬಂದ ಬ್ಯಾಲಹಳ್ಳಿ ಗೋವಿಂದಗೌಡರ ಆಡಳಿತ ಮಂಡಳಿ ಬ್ಯಾಂಕನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಸಹಕಾರ ಸಂಘವನ್ನು ಗಣಕೀರಣಗೊಳಿಸಿ ಲೆಕ್ಕಪರಿಶೋಧನೆ ಮುಗಿಸಿದ ಸರ್ವ ಸದಸ್ಯರ ಮಹಾಸಭೆಯನ್ನು ನಡೆಸುತ್ತಿರುವುದು ಎರಡೂ ಜಿಲ್ಲೆಯಲ್ಲಿ ಮೊಟ್ಟ ಮೊದಲು ಸೊಸೈಟಿ ನಮ್ಮದು ಎಂದರು. ಸೊಸೈಟಿಯಿಂದ 30 ಕೋಟಿ ವಿವಿಧ ಸಾಲ ನೀಡಲಾಗಿದ್ದು, ಫಲಾನುಭವಿಗಳು ಶೇ.100ರಷ್ಟು ಮರುಪಾವತಿ ಮಾಡುತ್ತಿರುವುದರಿಂದ ಸೊಸೈಟಿ ಸಾಧನೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಎರಡೂ ಜಿಲ್ಲೆಯಲ್ಲಿ ಉತ್ತಮ ಸಂಘವಾಗಿದೆ. ಸತತ ಪ್ರಯತ್ನದಿಂದ ಬ್ಯಾಂಕ್ ಆರ್ಥಿಕವಾಗಿ ಸಧೃಡಗೊಂಡಿದೆ. ಕಡಗಟ್ಟೂರು ಸೊಸೈಟಿ ಮೊದಲು ಆನ್ ಲೈನ ವ್ಯವಸ್ಥೆಯಾಗಿ ಮಾದರಿಯಾಗಿದೆ. ಗ್ರಾಹಕರಿಗೆ ಪಾರದರ್ಶಕ ಸೇವೆ ಕಲ್ಪಿಸುತ್ತಿದೆ ಎಂದು ತಿಳಿಸಿದರು.
ಗಣಕೀಕರಣದಿಂದ ಆ ದಿನದ ವರದಿಯನ್ನು ಅಂದೇ ಪಡೆದುಕೊಳ್ಳಬಹುದು. ಇದರಿಂದ ಯಾವುದೇ ಅವ್ಯವಹಾರಗಳಿಗೆ ಅವಕಾಶ ಇಲ್ಲವಾಗಿದೆ ಎಂದರು.
ನಿರ್ದೇಶಕ ಸೊಣ್ಣೇಗೌಡ ಮಾತನಾಡಿ, ಸಹಕಾರ ಸಂಘಗಳು ಕುಟುಂಬದ ಸಮಾನ. ಅಲ್ಲಿ ಏನೇ ನ್ಯೂನತೆ ಕಂಡು ಬಂದಾಗ ಪ್ರಶ್ನೆ ಮಾಡುವ ಅವಕಾಶ ಸರ್ವ ಸದಸ್ಯರ ಸಭೆಯಲ್ಲಿ ಕಲ್ಪಿಸಲಾಗಿದೆ. ಯಾವುದೇ ವಾಣಿಜ್ಯ ಬ್ಯಾಂಕಿನಲ್ಲಿ ದೊರೆಯದ ಸೌಲಭ್ಯಗಳು ಡಿಸಿಸಿ ಬ್ಯಾಂಕಿನಲ್ಲಿ ದೊರೆಯುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಸೊಸೈಟಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿ ಮುನೀಶ್ವರಪ್ಪ, ಪ್ರಶಾಂತ್‍ನನ್ನು ಸನ್ಮಾನಿಸಲಾಯಿತು.
ಸೊಸೈಟಿ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ಕುರಗಲ್ ವೆಂಕಟೇಶ್, ಕೆಎಸ್.ಕೃಷ್ಣಪ್ಪ, ಮುನಿರಾಜ, ಡಿ.ರಾಜಣ್ಣ, ಮಂಜುನಾಥ್, ಅಮರೇಶ್, ವಿಜಯಮ್ಮ, ಚೌಡರೆಡ್ಡಿ ಮತ್ತಿತರರಿದ್ದರು.